ದಾಖಲೆ ಬರೆದ ಶ್ರೀನಗರ ವಿಮಾನ ನಿಲ್ಧಾಣ!

ಶ್ರೀನಗರ: ಸದಾ ಮದ್ದು ಗುಂಡುಗಳ ಸದ್ದು ಕೇಳುತ್ತಾ, ಆ ಸದ್ದಿನ ನಡುವೆಯೂ ತನ್ನ ಸೌಂದರ್ಯವನ್ನ ಕಾಪಾಡಿಕೊಳ್ಳುತ್ತಾ ಪ್ರವಾಸಿಗರನ್ನ ಸೆಳೆಯುತ್ತಿರುವ ಶ್ರೀನಗರ ಸಾಧನೆಯೊಂದಕ್ಕೆ ಸಾಕ್ಷಿಯಾಗಿದೆ. ಅಂದಾಗೆ ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾರ್ಚ್ 28ರಂದು ಮೊದಲ ಬಾರಿಗೆ ಅತಿ ಹೆಚ್ಚು ವಿಮಾನಗಳು ಸಂಚಾರ ನಡೆಸಿದ್ದು, ವಿಮಾನ ನಿಲ್ದಾಣದ ಇತಿಹಾಸದಲ್ಲಿ ಮಾರ್ಚ್ 28 ಜನನಿಬಿಡ ದಿನ ಎಂದೇ ಹೇಳಲಾಗಿದೆ.
‘ಮಾರ್ಚ್ 28ರಂದು ಶ್ರೀನಗರ ವಿಮಾನ ನಿಲ್ದಾಣದಲ್ಲಿ 90 ವಿಮಾನಗಳು ಹಾರಾಟ ನಡೆಸಿದ್ದು, 15,014 ಮಂದಿ ಪ್ರಯಾಣ ಮಾಡಿದ್ದಾರೆ. ಅಂದು ವಿವಿಧ ಪ್ರದೇಶಗಳಿಂದ 45 ವಿಮಾನಗಳಲ್ಲಿ7,824 ಮಂದಿ ಶ್ರೀನಗರಕ್ಕೆ ಆಗಮಿಸಿದ್ದು, 45 ವಿಮಾನಗಳಲ್ಲಿ 7,190 ಮಂದಿ ಶ್ರೀನಗರ ವಿಮಾನ ನಿಲ್ದಾಣದಿಂದ ತೆರಳಿದ್ದಾರೆ. ಶ್ರೀನಗರ ವಿಮಾನ ನಿಲ್ದಾಣದಿಂದ ಇಂತಹ ದಾಖಲೆ ಸಂಖ್ಯೆಯ ವಿಮಾನಗಳು ಕಾರ್ಯನಿರ್ವಹಿಸುತ್ತಿರುವುದು ಇದೇ ಮೊದಲು’ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಶರದ್ ಕುಮಾರ್ ತಿಳಿಸಿದ್ದಾರೆ. ನಿಜಕ್ಕೂ ಇದೊಂದು ದಾಖಲೆಯಾಗಿತ್ತು. ಇಷ್ಟರ ಮಟ್ಟಿಗೆ ಪ್ರಯಾಣಿಕರ ಆಗಮನಕ್ಕೆ ಕಾರಣವೇನು ಎಂಬುದರ ಕುರಿತು ಚರ್ಚೆಯಾಗುತ್ತಿದೆ.
