ಗಂಡಸ್ತನ ಬಗ್ಗೆ ಚರ್ಚೆಗೆ ಸಮಯ ನಿಗದಿ ಮಾಡಿ ಎಂದಿದ್ದೇನೆ: ಸಂಸದ ಡಿ.ಕೆ.ಸುರೇಶ್

ಬೆಂಗಳೂರು: ಪ್ರಚೋದನೆ ಮತ್ತು ಭಾವನಾತ್ಮಕ ವಿಚಾರಗಳು ಬಿಜೆಪಿ ಅಜೆಂಡಾ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಧರ್ಮ ಸಂಸ್ಕೃತಿ ಇದ್ಯಾವುದು ಬೇಕಿಲ್ಲ. ದೇಶವನ್ನು ಒಡೆದು ಆಳುವುದೇ ಅವರೇ ಗುರಿ ಎಂದರು. ರಾಮನಗರದಲ್ಲಿ ಸೋಮವಾರ ಸಿಎಂ ಸಮ್ಮುಖದಲ್ಲೇ ನಡೆದ ಜಟಾಪಟಿ ಕುರಿತು ಪ್ರತಿಕ್ರಿಯಿಸಿದ ಅವರು, ಯುವಕರನ್ನು ಕೆರಳಿಸುವ ಕೆಲಸವನ್ನು ಸಚಿವ ಅಶ್ವತ್ಥನಾರಾಯಣ ನಿನ್ನೆ ಮಾಡಿದರು. ಗಂಡಸ್ತನದ ಬಗ್ಗೆ ಮಾತನಾಡಿ ರಾಮನಗರದ ಸ್ವಾಭಿಮಾನವನ್ನು ಕೆರಳಿಸುವ ಕೆಲಸ ಮಾಡಿದ್ದಾರೆ ಎಂದು ದೂರಿದರು.
ಅಶ್ವತ್ಥನಾರಾಯಣ ಮಾತುಗಳನ್ನು ತಡೆಯಲು ಸಭೆಯಲ್ಲಿದ್ದ ಸಿಎಂ ಅವರು ಮುಂದಾದರು. ಆದಗ್ಯೂ ಅವರು ರಾಮನಗರದ ಜಿಲ್ಲೆಗೆ ಬಂದು ಗಂಡಸ್ತನದ ಬಗ್ಗೆ ಮಾತನಾಡಿದ್ದಾರೆ. ಅದರ ಬಗ್ಗೆ ಚರ್ಚಿಸಲು ಸಮಯ ನಿಗದಿ ಮಾಡಿ ಎಂದು ಸಿಎಂ ಎದುರಲ್ಲೇ ಹೇಳಿದ್ದೇನೆ. ನಾನು ಪಲಾಯನ ಮಾಡಲ್ಲ ಎಂದರು.
ತಮ್ಮ ಮೇಲೆ ಹರಿಹಾಯ್ದಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಪ್ರತಿಕ್ರಿಯಿಸಲು ನಿರಾಕರಿಸಿದ ಡಿ.ಕೆ.ಸುರೇಶ್, ಅವರ ಬಗ್ಗೆ ಮಾತನಾಡಬೇಕಿಲ್ಲ ಎಂದರು.
ಈ ನಡುವೆ ರಾಮನಗರ ಘಟನೆ ಕುರಿತು ಟ್ವೀಟ್ ಮಾಡಿರುವ ಡಿ.ಕೆ.ಸುರೇಶ್, ಮುಖ್ಯಮಂತ್ರಿಗಳಿದ್ದ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದು ಯಾರು? ಸರ್ಕಾರಿ ಕಾರ್ಯಕ್ರಮವನ್ನ ದುರುಪಯೋಗ ಪಡಿಸಿಕೊಂಡಿದ್ದು ಯಾರು? ಸಂವಿಧಾನಶಿಲ್ಪಿ ಡಾ ಬಿ.ಆರ್ ಅಂಬೇಡ್ಕರ್ ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮದಲ್ಲಿ ದಲಿತಪರ ಸಂಘಟನೆಗಳು & ಚಿಂತಕರನ್ನ ದೂರವಿಟ್ಟು ಕಾರ್ಯಕ್ರಮ ಮಾಡಿದ್ದು ಸರಿಯಾ? ಎಂದು ಪ್ರಶ್ನಿಸಿದ್ದಾರೆ. ಇದು ರಾಮನಗರ ಜಿಲ್ಲೆಯ ಜನರಿಗಾದ ಅಗೌರವ ಅಲ್ಲವೇ? ಈ ದುರ್ವರ್ತನೆಯನ್ನ ರಾಮನಗರದ ಜಿಲ್ಲೆಯವರಾದ ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದೂ ಹೇಳಿದ್ದಾರೆ.
