ಶ್ರೀಗಂಧಕ್ಕೆ ಸೂಕ್ತ ಪರಿಹಾರ ಧನ ನೀಡಲು ಸರ್ಕಾರಕ್ಕೆ ಮನವಿ

ಚಿಕ್ಕಮಗಳೂರು: ವಿವಿಧ ಯೋಜನೆಗಳಡಿ ಭೂಸ್ವಾಧೀನ ಮಾಡಿದ ಪ್ರಕರಣಗಳಲ್ಲಿ ಶ್ರೀಗಂಧ ಮರಗಳಿಗೆ ವೈಜ್ಞಾನಿಕವಾಗಿ ಪರಿಹಾರ ಮೊತ್ತ ನಿಗದಿಪಡಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘ ಇಂದಿರಾ ನಗರ ಬೆಂಗಳೂರು ವತಿಯಿಂದ ಶಾಸಕ ಡಿ.ಎಸ್.ಸುರೇಶ್ ಅವರಿಗೆ ಮನವಿ ಸಲ್ಲಿಸಲಾಯಿತು. ಸಮಸ್ಯೆಯನ್ನು ಸರ್ಕಾರ ಮಧ್ಯೆ ಪ್ರವೇಶಿಸಿ 7 ದಿನಗಳೊಳಗೆ ಬಗೆಹರಿಸದ ಪಕ್ಷದಲ್ಲಿ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ರಾಷ್ಟ್ರೀಯ ಹೆದ್ದಾರಿ- 206ರಲ್ಲಿ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪಟ್ಟಣದ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿಗಾಗಿ ಹಳೆಯೂರು ಗ್ರಾಮದಲ್ಲಿ ಭೂಸ್ವಾಧೀನ ಮಾಡಿರುವ ಟಿ.ಎನ್.ವಿಶುಕುಮಾರ್, ಪ್ರತಾಪ್ ಕುಮಾರ್ ಮತ್ತು ಇತರೇ 20 ರೈತರ ಜಮೀನುಗಳಲ್ಲಿ ಕಳೆದ 10 ವರ್ಷಗಳಿಂದ ಬೆಳೆಸಿರುವ ಶ್ರೀಗಂಧದ ಮರಗಳಿಗೆ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆ ಮೌಲ್ಯಮಾಪನ ಮಾಡಿರುವಂತೆ ಪರಿಹಾರಧನ ನೀಡುವಂತೆ ಆದೇಶವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅನಗತ್ಯವಾಗಿ ಅರಣ್ಯ ಇಲಾಖೆಯಿಂದ ಶ್ರೀಗಂಧ ಮರಗಳಿಗೆ ವಿವಾದಾತ್ಮಕ ಅಂಶಗಳಿಂದ ವಿವಿಧ ನ್ಯೂನತೆಗಳಿಂದ ಕೂಡಿರುವ ಅವೈಜ್ಞಾನಿಕವಾಗಿ ದರ ನಿಗದಿಪಡಿಸಿಕೊಂಡಿರುವ ಆದೇಶ ಜಾರಿಗೊಳಿಸದಿರಲು ಕೋರಿದೆ. ಇದು ಸಂತ್ರಸ್ಥ ರೈತರಿಗೆ ಮಾಡಿದ ಘೋರ ಅನ್ಯಾಯವಾಗಿದೆ. ಕಾನೂನು ಮತ್ತು ಪ್ರಾಕೃತಿಕ ನ್ಯಾಯಕ್ಕೆ ವಿರುದ್ಧವಾದ ಕ್ರಮವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಒಂದು ಶ್ರೀಗಂಧದ ಮರಕ್ಕೆ 2,44,000 ರು. ನೀಡುವುದರ ಬದಲಾಗಿ ಅರಣ್ಯ ಇಲಾಖೆಯಿಂದ ಕಡಿಮೆ ಮೌಲ್ಯ ನಿಗದಿಪಡಿಸಲಾಗಿದೆ. ಇದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಅರಣ್ಯ ಇಲಾಖೆ ಸಂತ್ರಸ್ಥ ರೈತರಿಗೆ ಮಾಡಿರುವ ಮರಣ ಶಾಸನವಾಗಿದೆ. ಆದ್ದರಿಂದ ಈ ಅನ್ಯಾಯವನ್ನು ವಿರೋಧಿಸಿ ಸಂತ್ರಸ್ಥ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಆದೇಶದಂತೆ ಸಂತ್ರಸ್ಥ ರೈತರಿಗೆ ಸರ್ಕಾರ ಯೋಗ್ಯ ಪರಿಹಾರ ನೀಡಬೇಕು ಎಂದರು. ಮನವಿ ಸಲ್ಲಿಸುವ ಸಂದರ್ಭ ಶ್ರೀಗಂಧ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎನ್.ವಿಶುಕುಮಾರ್, ಮಾಜಿ ಪುರಸಭಾಧ್ಯಕ್ಷೆ ಅಶ್ವಿನಿ ರಘು, ಪಲ್ಲವಿ, ಮಲ್ಲಿಕಾರ್ಜುನ್, ತಿಪ್ಪೇಶಪ್ಪ ಮತ್ತಿತರರು ಭಾಗವಹಿಸಿದ್ದರು.
