Chetan Kumar : ನಟ ಚೇತನ್ಗೆ 14 ದಿನ ನ್ಯಾಯಾಂಗ ಬಂಧನ

ನ್ಯಾಯಾಂಗ ನಿಂಧನೆ ಆರೋಪದಡಿ ಬಂಧನಕೊಳ್ಳಗಾಗಿರುವ ನಟ ಚೇತನ್ರನ್ನ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ನ್ಯಾಯಾಂಗ ನಿಂದನೆ ಆರೋಪದಡಿ ಚೇತನ್ರನ್ನ ಶೇಷಾದ್ರಿಪುರಂ ಪೊಲೀಸರು ಮಂಗಳವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಈ ವೇಳೆ ಚೇತನ್ ಅವರಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ 8ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.
ಹಿಜಾಬ್ ಕುರಿತಾಗಿ ನಟ ಚೇತನ್ ನೀಡಿದ ಹೇಳಿಕೆಯಿಂದಾಗಿ ಚೇತನ್ ಅವರನ್ನ ಬಂಧಿಸಲಾಗಿದೆ. ಫೆ.16ರಂದು ನಟ ಚೇತನ್ ಹಿಜಾಬ್ ವಿಚಾರದಲ್ಲಿ ಕೋರ್ಟ್ನಲ್ಲಿ ನಡೆಯುತ್ತಿರುವ ವಿಚಾರಣೆಯ ಕುರಿತಾಗಿ ಟ್ವೀಟ್ ಮಾಡಿ ನ್ಯಾ.ಕೃಷ್ಣ ದೀಕ್ಷಿತ್ ಅವರನ್ನು ನಿಂದಿಸಿದ್ದರು. ಜೊತೆಗೆ ಕಳೆದ ಎರಡು ವರ್ಷದ ಹಿಂದಿನ ತಾವು ಮಾಡಿದ್ದ ಟ್ವೀಟ್ ಅನ್ನು ರೀಟ್ವೀಟ್ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ವಿಚಾರಣೆ ನಡೆಯುವ ಸಂದರ್ಭದಲ್ಲಿ ಜಡ್ಜ್ ಅವರನ್ನು ನಿಂದಿಸುವುದು ಅಪರಾಧ. ಈ ಕಾರಣಕ್ಕೆ ಪೊಲೀಸರು ಚೇತನ್ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಿಸಿಕೊಂಡು ಅರೆಸ್ಟ್ ಮಾಡಿದ್ದಾರೆ.
ಚೇತನ್ ಕುಮಾರ್ ವಿರುದ್ಧ ದೂರಿನಲ್ಲಿ ಏನಿದೆ?
ನಟ ಚೇತನ್ ಕುಮಾರ್ ಸಾಮಾನ್ಯ ಜನರಲ್ಲಿ ಹಾಗೂ ಒಂದು ಕೋಮಿನ ಜನಾಂಗದವರಿಗೆ ಕಾನೂನು ಮತ್ತು ಸುವ್ಯವಸ್ಥೆ, ನ್ಯಾಯಾಲಯ, ಸರ್ಕಾರ ಮತ್ತು ನಮ್ಮ ದೇಶದ ಸಾಂವಿಧಾನಿಕ ವ್ಯವಸ್ಥೆಯ ಮೇಲೆ ಅಪನಂಬಿಕೆ, ಆಕ್ರೋಶ ಬರುವ ಹಾಗೆ ಟ್ವೀಟ್ ಮಾಡಿದ್ದಾರೆ. ಮುಸ್ಲಿಂ ಕೋಮಿನವರು ಮತ್ತು ಇತರೆ ಜನರು ಪ್ರತಿಭಟನೆ, ಗಲಭೆ ಹಾಗೂ ಇತ್ಯಾದಿಗಳನ್ನು ಮಾಡುವಂತೆ ಪ್ರಚೋದಿಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇನ್ನೂ ನಟ ಚೇತನ್ರನ್ನ ಪೊಲೀಸರು ಬಂಧಿಸುತ್ತಿದ್ದಂತೆ ಫೇಸ್ಬುಕ್ ಲೈವ್ ಬಂದ ಚೇತನ್ ಪತ್ನಿ ಮೇಘಾ ಮನೆಯಲ್ಲಿದ್ದ ಚೇತನ್ ಅವರನ್ನು ಯಾರೋ ಕಿಡ್ನಾಪ್ ಮಾಡಿದ್ದಾರೆ. ನಾನು ಮನೆಯಲ್ಲಾ ಹುಡುಕಿದೆ, ಚೇತನ್ ಎಲ್ಲಿ ಎಂದು ಅಲ್ಲೇ ಇದ್ದವರನ್ನು ಕೇಳಿದಾಗ ಪೊಲೀಸ್ ನವರು ಕರೆದುಕೊಂಡು ಹೋದರು ಎಂದು ಹೇಳಿದರು. ನಾನು ಶೇಷಾದ್ರಿಪುರಂ ಪೊಲೀಸ್ ಠಾಣೆಯನ್ನು ಸಂಪರ್ಕ ಮಾಡಿದೆ. ಆದರೆ ಅವರಿಂದ ಸಕಾರಾತ್ಮಕವಾಗಿ ಉತ್ತರ ಸಿಗುತ್ತಿಲ್ಲ ಎಂದಿದ್ದಾರೆ.
ಪೊಲೀಸ್ ನವರು ಅವರನ್ನು ಬಂಧಿಸಿದ್ದರೆ, ಯಾವ ಕಾರಣಕ್ಕಾಗಿ ಎನ್ನುವುದನ್ನು ಸ್ಪಷ್ಟಪಡಿಸಬೇಕಿತ್ತು. ಅಥವಾ ಮನೆಯವರಿಗೆ ಮಾಹಿತಿ ನೀಡಬೇಕಿತ್ತು. ಯಾವುದೇ ನೋಟಿಸ್ ನೀಡದೇ, ಮನೆಯವರಿಗೂ ಮಾಹಿತಿ ಕೊಡದೇ ಏಕಾಏಕಿ ಕರೆದುಕೊಂಡು ಹೋಗಿದ್ದಾರೆ ಎಂದು ಚೇತನ್ ಪತ್ನಿ ಮೇಘಾ ದೂರಿದ್ದರು.
