Breaking NewsLatestರಾಜ್ಯರಾಷ್ಟ್ರೀಯವಿದೇಶಸುದ್ದಿ

ರಷ್ಯಾ-ಉಕ್ರೇನ್ ಯುದ್ಧ: ಸಂಘರ್ಷದ ನಡುವೆ ಶಾಂತಿ ಮಾತುಕತೆ, ಉಕ್ರೇನ್ ಗೆ ಭಾರತದಿಂದ ಪರಿಹಾರ ಸಾಮಗ್ರಿ

ನವದೆಹಲಿ:ಮಹತ್ವದ ಬೆಳವಣಿಗೆಯೊಂದರಲ್ಲಿ ಉಕ್ರೇನ್- ರಷ್ಯಾ ಯುದ್ಧದ ನಡುವೆಯೇ ಬಿಕ್ಕಟ್ಟು ಪರಿಹಾರ ಸಂಬಂಧ ಉಭಯ ದೇಶಗಳ ನಡುವೆ ಉಕ್ರೇನ್-ಬೆಲಾರುಸ್ ಗಡಿಯಲ್ಲಿ ಉನ್ನತ ಮಟ್ಟದ ಶಾಂತಿ ಮಾತುಕತೆ ಪ್ರಾರಂಭವಾಗಿದೆ. ಈ ಬೆಳವಣಿಗೆ ಭಾರತವೂ ಸೇರಿದಂತೆ ಶಾಂತಿಪ್ರಿಯರಿಗೆ ಕೊಂಚ ನೆಮ್ಮದಿ ಮೂಡಿಸಿದೆ.

ಮಾತುಕತೆಗೆ ತಮ್ಮ ತಕ್ಷಣದ ಗುರಿ ಕದನ ವಿರಾಮ ಎಂದು ಉಕ್ರೇನ್ ಹೇಳಿದೆ. ಉಕ್ರೇನ್, ಬೆಲ್ಜಿಯಂ, ಫಿನ್ಲ್ಯಾಂಡ್ ಮತ್ತು ಕೆನಡಾದಲ್ಲಿ ರಷ್ಯಾದ ಸೇನಾ ಕಾರ್ಯಾಚರಣೆಗೆ ಪ್ರತಿಯಾಗಿ ರಷ್ಯಾದ ವಿಮಾನಗಳಿಗೆ ತಮ್ಮ ವಾಯು ಪ್ರದೇಶವನ್ನು ಮುಚ್ಚಿವೆ.

ಇದರ ನಡುವೆ ಅಮೆರಿಕಾ ನೇತೃತ್ವದ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾದ ಮೇಲ ಹೊಸ ಆರ್ಧಿಕ ನಿರ್ಬಂಧಗಳನ್ನು ಘೋಷಿಸಿವೆ.ಈ ಮೂಲಕ ರಷ್ಯಾವನ್ನು ಮಣಿಸಲು ಯತ್ನಿಸಿವೆ.

ಉಕ್ರೇನ್-ಬೆಲರೂಸ್ ಗಡಿಯಲ್ಲಿ ನಡೆದಿರುವ ಶಾಂತಿ ಮಾತುಕತೆಯಿಂದ ಬಿಕ್ಕಟ್ಟು ಪರಿಹಾರವಾಗುತ್ತದೆ ಎಂಬ ಭರವಸೆ ಏನೂ ಇಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕೀ ಮಾತುಕತೆ ಮುನ್ನ ಹೇಳಿಕೆ ನೀಡಿದ್ದಾರೆ. ಮಾತುಕತೆ ನಡುವೆಯೇ ಯುದ್ಧಪೀಡಿತ ಉಭಯ ರಾಷ್ಟ್ರಗಳೂ ಪರಸ್ಪರ ಸೇನಾ ಕಾರ್ಯಾಚರಣೆ ನಡೆಸಿವೆ. ರಷ್ಯಾ ನಡೆಸಿದ ಷೆಲ್ ದಾಳಿಗೆ ಉಕ್ರೇನ್ ನ ಹಾರ್ಕಿವ್ ನಗರದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ.

ಏತನ್ಮಧ್ಯೆ, ಉಕ್ರೇನ್ ಬಿಕ್ಕಟ್ಟು ಪರಿಹಾರವಾಗಬೇಕಾದರೆ ಆ ದೇಶ ತಟಸ್ಥ ನಿಲುವು ತಾಳಬೇಕು. ಸೇನೆಯನ್ನು ತ್ಯಜಿಸಬೇಕು ಮತ್ತು ನಾಜಿ ಮನಃಸ್ಥಿತಿಯಿಂದ ಹೊರ ಬರಬೇಕು. ಕ್ರಿಮಿಯಾ ರಷ್ಯಾದ ಭಾಗ ಎಂಬ ಮಾನ್ಯತೆಯನ್ನೂ ಕೊಡಬೇಕು ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಫ್ರಾನ್ಸ್ ಅಧ್ಯಕ್ಷ ಇಮಾನ್ಯುಯಲ್ ಮ್ಯಾಕ್ರನ್ ಅವರಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.

ಮಾತುಕತೆ ಸಂದರ್ಭದಲ್ಲಿ ಫ್ರಾನ್ಸ್, ನಾಗರಿಕರ ಮೇಲೆ ದಾಳಿ ನಡೆಸಬಾರದು, ರಸ್ತೆ, ಕುಡಿಯುವ ನೀರು ಸೇರಿದಂತೆ ನಾಗರಿಕ ಮೂಲಸೌಲಭ್ಯಗಳನ್ನು ನಾಶಪಡಿಸಬಾರದು ಎಂದು ಮ್ಯಾಕ್ರನ್ ಅವರು ಒತ್ತಾಯಿಸಿದ್ದಾರೆ. ಇದಕ್ಕೆ ಪುಟಿನ್ ಒಪ್ಪಿದ್ದಾರೆ ಎಂದು ಮ್ಯಾಕ್ರನ್ ಅವರ ಕಚೇರಿ ಪ್ರಕಟಣೆ ತಿಳಿಸಿದೆ.

ಪಶ್ಚಿಮ ದೇಶಗಳು ಕಠಿಣ ನಿರ್ಬಂಧಗಳನ್ನು ಹೇರಿವೆ. ಅದನ್ನು ಜಿರ್ಣಿಸಿಕೊಳ್ಳುವ ಶಕ್ತಿ ರಷ್ಯಾಕ್ಕಿದೆ ಎಂದು ವಿದೇಶಾಂಗ ಸಚಿವ ಡಿಮೆಟ್ರಿ ಪೆಸ್ಕೋ ಹೇಳಿದ್ದಾರೆ.  

ಭಾರತದಿಂದ ಪರಿಹಾರ ಸಾಮಗ್ರಿ

ಈ ನಡುವೆ ಯುದ್ಧಪೀಡಿತ ಉಕ್ರೇನ್ ಗೆ ಭಾರತ ಪರಿಹಾರ ಸಾಮಗ್ರಿ ಕಳುಹಿಸಲು ತೀರ್ಮಾನಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಸೋಮವಾರ ಸಂಜೆ ನಡೆದ ಎರಡನೇ ಉನ್ನತ ಮಟ್ಟದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಭಾನುವಾರ ನಡೆದ ಮೊದಲ ಉನ್ನತ ಮಟ್ಟದ ಸಭೆಯಲ್ಲಿ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಉಕ್ರೇನ್ ನೆರೆಯ ರಾಷ್ಟ್ರಗಳಿಗೆ ಕೇಂದ್ರದ ನಾಲ್ವರು ಸಚಿವರನ್ನು ಕಳಿಸುವ ತೀರ್ಮಾನ ಕೈಗೊಳ್ಳಲಾಗಿತ್ತು. 

ರಾಜತಾಂತ್ರಿಕ ನಡೆ ಮತ್ತು ಪರಸ್ಪರ ಮಾತುಕತೆ ಇಲ್ಲದೇ ಬಿಕ್ಕಟ್ಟಿಗೆ ಪರಿಹಾರ ಇಲ್ಲ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರಿ ಟಿ.ಎಸ್.ತಿರುಮೂರ್ತಿ ಹೇಳಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button