
ನವದೆಹಲಿ: ಉಕ್ರೇನಿನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಂಗಳವಾರ ತಮ್ಮ ನಗರಗಳನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ ದೇಶವಾಸಿಗಳು ತಮ್ಮ ಮಾತೃಭೂಮಿ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದಾರೆ ಎಂದರು. ಮಂಗಳವಾರ ಯುರೋಪಿಯನ್ ಪಾರ್ಲಿಮೆಂಟ್ ಗೆ ವರ್ಚುವೆಲ್ ಭಾಷಣದಲ್ಲಿ, ಝೆಲೆನ್ಸ್ಕಿ ಯಾರೂ ಕೂಡ ಅವರನ್ನು ಬಗ್ಗಿಸಲಾಗದು. ಅವರು ಬಲಶಾಲಿಗಳು ಮತ್ತು ಅವರು ಉಕ್ರೇನಿಯನ್ನರು ಎಂದು ಆತ್ಮವಿಶ್ವಾಸದಿಂದ ನುಡಿದರು.
ರಷ್ಯಾದೊಂದಿಗಿನ ತನ್ನ ಯುದ್ಧದಲ್ಲಿ ಯುರೋಪ್ ಒಕ್ಕೂಟವು ಉಕ್ರೇನ್ ಪರವಾಗಿದೆ ಎಂಬುದನ್ನು ಸಾಬೀತುಪಡಿಸಲು ಝೆಲೆನ್ಸ್ಕಿ ಒತ್ತಾಯಿಸಿದರು. ಸೋಮವಾರ ಯುರೋಪ್ ಬಣ ಸೇರುವ ಅಧಿಕೃತ ವಿನಂತಿ ಪತ್ರಕ್ಕೆ ಅವರು ಸಹಿ ಹಾಕಿದ್ದಾರೆ.
ತನ್ನ ರಾಜಧಾನಿ ಕೈವ್ ನ ರಕ್ಷಣೆ ತನ್ನ ಪ್ರಮುಖ ಆದ್ಯತೆಯಾಗಿದೆ. ಖಾರ್ಕಿವ್ ಮತ್ತು ಕೈವ್ ಪ್ರಸ್ತುತ ರಷ್ಯಾದ ಪ್ರಮುಖ ಗುರಿಗಳಾಗಿವೆ ಎಂದು ಝೆಲೆನ್ಸ್ಕೀ ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ. ರಷ್ಯಾ ಭಯೋತ್ಪಾದನೆ ಮಾಡುತ್ತಿದೆ ಎಂದು ಘೋಷಿಸುವಂತೆ ಅವರು ವಿಶ್ವ ಸಮುದಾಯಕ್ಕೆ ಕರೆ ನೀಡಿದ್ದಾರೆ. ಅಪರಾಧಿ ಸ್ಥಾನದಲ್ಲಿರುವ ರಷ್ಯಾದ ಪ್ರಮುಖರನ್ನು ಅಂತರ ರಾಷ್ಟ್ರೀಯ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಬೇಕು ಎಂದೂ ಅವರು ಬಯಸಿದ್ದಾರೆ.
ಯುರೋಪಿಯನ್ ಯೂನಿಯನ್ ಈಗಾಗಲೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಅವರನ್ನು ಬೆಂಬಲಿಸುವ ಅಧಿಕಾರಿಗಳು ಮತ್ತು ಇತರ ಪ್ರಮುಖರು ಹಾಗೂ ರಷ್ಯಾದ ಸೆಂಟ್ರಲ್ ಬ್ಯಾಂಕ್ ನ್ನು ಗುರಿಯಾಗಿಟ್ಟುಕೊಂಡು ನಿರ್ಬಂಧಗಳ ಸುರಿಮಳೆ ಗೈದಿದೆ. ಇದಾವುದರಿಂದಲೂ ತಾನು ವಿಚಲಿತನಾಗುವುದಿಲ್ಲ ಎಂದು ಅಧ್ಯಕ್ಷ ಪುಟಿನ್ ಸ್ಪಷ್ಟಪಡಿಸಿದ್ದಾರೆ.
