Ukraine: ಕಾಲೇಜಿನವರ ಮಾತು ಕೇಳಿ ನಮ್ಮ ಮಗ ಸಿಲುಕಿದ : ಕಲಬುರಗಿ ಯುವಕನ ತಂದೆ ಅಳಲು

ಕಲಬುರಗಿ: ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರುವ ಸುಳಿವು 8 ದಿನ ಮುಂಚೆಯೇ ಸಿಕ್ಕಿತ್ತು. ಆದ್ರೆ ಹಾಗೇನು ಆಗುವದಿಲ್ಲ ಅಂತ ಅಲ್ಲಿನ ಕಾಲೇಜನವರು ಹೇಳಿದ ಕಾರಣ ನಮ್ಮ ಮಗ ಅಲ್ಲಿಯೇ ಉಳಿದು ನರಕಯಾತನೆ ಅನುಭವಿಸುತ್ತಿದ್ದಾನೆ ಎಂದು ಉಕ್ರೇನ್ ನಲ್ಲಿ ಸಿಲುಕಿರುವ ಕಲಬುರಗಿಯ ಪ್ರಜ್ವಲ್ ಕುಮಾರ ತಂದೆ ಮಲ್ಲಿನಾಥ ಗುಬ್ಯಾಡ್ ಅಳಲು ತೊಡಿಕೊಂಡಿದ್ದಾರೆ.
ಕಾಲೇಜಿನವರ ಮಾತು ನಂಬಿ ನಾವು ಕೆಟ್ಟಿದ್ದೇವೆ. ಭಾರತ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದ್ದು, ಪ್ರಧಾನಿ ಮೋದಿ ಅವರು ಮುತವರ್ಜಿ ವಹಿಸಿ ಊಳಿದ ಮಕ್ಕಳನ್ನು ಕರೆ ತರಬೇಕೆಂದು ಪ್ರಜ್ವಲ್ ತಂದೆ ಮಲ್ಲಿನಾಥ ಒತ್ತಾಯಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ಉಕ್ರೇನ್ನ ಮೈಕೋಲಿವ್ ಸಿಟಿಯಲ್ಲಿ ಪ್ರಜ್ವಲ್ ಎಂಬಿಬಿಎಸ್ ಓದುತ್ತಿದ್ದಾರೆ. ರಜೆಗೆ ಆಗಮಿಸಿ ಕಳೆದ ಜುಲೈ ತಿಂಗಳಿನಲ್ಲಿ ಉಕ್ರೇನ್ ಮರಳಿದ್ದಾರೆ. ಪೆಟ್ರೋ ಮೋಯಾಲಾ ಬ್ಲ್ಯಾಕ್ ಸೀ ನ್ಯಾಷಿನಲ್ ಯುನಿವರ್ಸಿಟಿಯಲ್ಲಿ ವ್ಯಾಸಾಂಗ್ ಮಾಡುತ್ತಿರುವ ಪ್ರಜ್ವಲ್, ರಷ್ಯಾ ದಾಳಿಯಿಂದ ಅಕ್ಷರಶಃ ನರಕಯಾತನೆ ಅನುಭವಿಸುತ್ತಿದ್ದಾರೆ. ರಷ್ಯಾ ದಾಳಿಯ ಬಗ್ಗೆ ಮುನ್ಸೂಚನೆ ದೊರೆತಾಗ ಮರಳು ಬಾ ಅಂತ ಮಗನಿಗೆ ಹೇಳಿದ್ದೇವು. ಆದರೆ ಅಲ್ಲಿನ ಕಾಲೇಜ್ ನವರು ಯುದ್ಧ ನಡೆಯುವದಿಲ್ಲ, ಕ್ಲಾಸ್ ಇರಲಿವೆ. ಪರೀಕ್ಷೆ ಕೂಡಾ ಇರಲಿದೆ ಅಂತ ಹೇಳಿದ ಕಾರಣ ಅವರ ಮಾತು ನಂಬಿ ನಮ್ಮ ಮಗ ಅಲ್ಲಿಯೇ ಉಳಿದುಕೊಂಡು ಪರಿಪಾಟಲು ಅನುಭವಿಸುತ್ತಿದ್ದಾನೆ ಎಂದು ಪ್ರಜ್ವಲ್ ತಂದೆ ಕಣ್ಣಿರು ಹಾಕಿದ್ದಾರೆ.
ಸದ್ಯ ರಷ್ಯಾ ದಾಳಿಯಿಂದ ಉಕ್ರೇನ್ ಸ್ಮಶಾನವಾಗಿ ಬದಲಾಗಿದೆ. ಕಲಬುರಗಿಯ ಪ್ರಜ್ವಲ್ ಹಾಗೂ ಸ್ನೇಹಿತರು ಬಸ್, ರೈಲು ಸೇರಿ ಸಿಗುವ ಸೌಲಭ್ಯ ಬಳಸಿಕೊಂಡು ಉಕ್ರೇನ್ ಗಡಿಗೆ ತಲುಪಿ, ಅಲ್ಲಿಂದ ಭಾರತದ ವಿಮಾನ ಹಿಡಿದು ದೇಶಕ್ಕೆ ಮರಳಲು ಪ್ರಯತ್ನ ನಡೆಸಿದ್ದಾರೆ. ಮೊನ್ನೆಯವರೆಗೆ ಪ್ರಜ್ವಲ್ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ. ಆದರೆ ಈಗ ಸಂಪರ್ಕ ಸಾಧಿಸಲು ಆಗುತ್ತಿಲ್ಲ, ಕೇವಲ ಒಂದೆರಡು ಬಾರಿ ಮೇಸೆಜ್ ಮಾಡಿ ತಾನು ಸೇಫ್ ಇರುವದಾಗಿ ಪ್ರಜ್ವಲ್ ಪೊಷಕರಿಗೆ ಹೇಳಿದ್ದಾರೆ. ಇತ್ತ ಮಗನ ಕಷ್ಟ ಕಂಡು ಪೊಷಕರು ಕಣ್ಣಿರು ಹಾಕುತ್ತಾ ಕುಳಿತಿದ್ದಾರೆ.
