
ನವದೆಹಲಿ: ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಸಂಘರ್ಷದ ಬಗ್ಗೆ ಸುಪ್ರೀಂಕೋರ್ಟ್ ಏನನ್ನೂ ಮಾಡಲು ಸಾಧ್ಯವಿಲ್ಲ. ನ್ಯಾಯಾಲಯ ಏನು ಮಾಡುತ್ತದೆ. ಯುದ್ಧ ನಿಲ್ಲಿಸಲು ನಾನು ರಷ್ಯಾದ ಅಧ್ಯಕ್ಷರಿಗೆ ನಿರ್ದೇಶನಗಳನ್ನು ನೀಡಬಹುದೇ ? ಎಂದು ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಗುರುವಾರ ಹೇಳಿದ್ದಾರೆ.
ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಭಾರತ ಸರ್ಕಾರಕ್ಕೆ ನಿರ್ದೇಶನಗಳನ್ನು ನೀಡುವಂತೆ ಕೋರಿ ವಕೀಲರೊಬ್ಬರು ಸುಪ್ರೀಂಕೋರ್ಟ್ ಗೆ ಮೊರೆ ಹೋಗಿರುವುದನ್ನು ಪ್ರಸ್ತಾಪಿಸಿದ ಸಿಜೆಐ, ಭಾರತೀಯರನ್ನು ಸ್ಥಳಾಂತರಿಸಲು ಭಾರತ ಸರ್ಕಾರ ತನ್ನ ಕೆಲಸ ಮಾಡುತ್ತಿದೆ ಎಂದರು.
ರೊಮೇನಿಯಾ ಗಡಿಯಲ್ಲಿ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ ಮತ್ತು ಗಡಿ ದಾಟದಂತೆ ಅವರನ್ನು ಅಲ್ಲಿ ತಡೆಯಲಾಗಿದೆ ಎಂದು ಅರ್ಜಿದಾರ ವಕೀಲರು ಹೇಳಿದಾಗ, ಉಕ್ರೇನ್ ನಿಂದ ಸ್ಥಳಾಂತರಿಸಲು ಉನ್ನತ ನ್ಯಾಯಾಲಯವನ್ನು ಸಂಪರ್ಕಿಸಿರುವ ಭಾರತೀಯ ವೈದ್ಯ ವಿದ್ಯಾರ್ಥಿಗಳಿಗೆ ಸಹಾಯ ಮಾಡುವಂತೆ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು ಪೀಠ ಸೂಚಿಸಿತು.
ಉಕ್ರೇನ್ ಗಡಿ ದಾಟಿದ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಸಚಿವರನ್ನು ಕಳುಹಿಸಿದೆ ಮತ್ತು ಈವರೆಗೆ ಉಕ್ರೇನ್ನಲ್ಲಿ ಸಿಲುಕಿರುವ ಎಲ್ಲರಿಗೂ ನೆರೆಯ ದೇಶಗಳಿಗೆ ಹೋಗಲು ಅವಕಾಶ ನೀಡಲಾಗಿದೆ ಎಂದು ಪರಿಗಣಿಸಲಾಗಿದೆ ಎಂದು ವೇಣುಗೋಪಾಲ್ ಸುಪ್ರೀಂಕೋರ್ಟ್ ಗೆ ತಿಳಿಸಿದರು.
