Breaking NewsLatestರಾಜ್ಯರಾಷ್ಟ್ರೀಯವಿದೇಶಸುದ್ದಿ

ನೈಸರ್ಗಿಕ ಕಾರಣಗಳಿಂದ ಚಂದನ್ ಜಿಂದಾಲ್ ಸಾವು: ಎಂಇಎ ವಕ್ತಾರ ಅರಿಂದಮ್ ಬಾಗ್ಚಿ ಸ್ಪಷ್ಟನೆ

Chandan Jindal Death: ನವದೆಹಲಿ: ಯುದ್ಧಪೀಡಿತ ಉಕ್ರೇನ್ ನಲ್ಲಿ ಪಂಜಾಬ್ ಮೂಲದ ವಿದ್ಯಾರ್ಥಿ ಚಂದನ್ ಜಿಂದಾಲ್ ನೈಸರ್ಗಿಕ ಕಾರಣಗಳಿಂದ ಸಾವನ್ನಪ್ಪಿದ್ದಾರೆ. ಅವರು ಕಳೆದ ಕೆಲವು ದಿನಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ(ಎಂಇಎ) ವಕ್ತಾರ ಅರಿಂದಮ್ ಬಾಗ್ಚಿ ಸ್ಪಷ್ಟಪಡಿಸಿದ್ದಾರೆ.

ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಕ್ರೇನ್ ತೊರೆದಿರುವ ಭಾರತೀಯರ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗಿದೆ. ಈಗಾಗಲೇ ಸುಮಾರು 17 ಸಾವಿರ ಭಾರತೀಯರು ಉಕ್ರೇನ್ ಗಡಿಯನ್ನು ತೊರೆದಿದ್ದಾರೆ. ಈ ಹಿಂದೆ ರಾಯಭಾರ ಕಚೇರಿಯಲ್ಲಿ ನೊಂದಾಯಿಸದ ಕೆಲವು ಭಾರತೀಯರು ಇವರಲ್ಲಿ ಸೇರಿದ್ದಾರೆ ಎಂದು ತಿಳಿಸಿದರು.

ವಿಮಾನಗಳ ಸಂಖ್ಯೆ ಹೆಚ್ಚಳ

ಆಪರೇಷನ್ ಗಂಗಾ ಅಡಿಯಲ್ಲಿ ವಿಮಾನಗಳು ಕೂಡ ತೀವ್ರವಾಗಿ ಹೆಚ್ಚಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 6 ವಿಮಾನಗಳು ಭಾರತಕ್ಕೆ ಬಂದಿಳಿದ್ದು, ಈವರೆಗೆ 15 ವಿಮಾನಗಳ ಮೂಲಕ 3,352 ಮಂದಿಯನ್ನು ಸ್ವದೇಶಕ್ಕೆ ಕರೆ ತರಲಾಗಿದೆ. ಮುಂದಿನ 24 ಗಂಟೆಗಳಲ್ಲಿ 15 ವಿಮಾನಗಳನ್ನು ನಿಗದಿಪಡಿಸಲಾಗಿದೆ ಎಂದು ವಿವರಿಸಿದರು.

ಪೂರ್ವ ಉಕ್ರೇನ್ ನಲ್ಲಿ ನಿರಂತರ ಹಿಂಸಾಚಾರ ನಡೆಯುತ್ತಿರುವುದರಿಂದ ನಗರಗಳು ಕಳವಳದ ಪ್ರದೇಶಗಳಾಗಿ ಮಾರ್ಪಟ್ಟಿವೆ. ಕೆಲವು ವಿದ್ಯಾರ್ಥಿಗಳು ಮಂಗಳವಾರ ರಾತ್ರಿ ಮತ್ತು ಬುಧವಾರ ಬೆಳಗ್ಗೆ  ಖಾರ್ಕಿವ್ ನಿಂದ ರೈಲುಗಳನ್ನು ಹತ್ತಲು ಸಾಧ್ಯವಾಯಿತು. ಅವರಿಗೆ ರಾಯಭಾರ ಕಚೇರಿ ಸಹಾಯ ಮಾಡಿದೆ ಎಂದೂ ಬಾಗ್ಚಿ ತಿಳಿಸಿದರು.

ರಷ್ಯಾದ ಜತೆ ಚರ್ಚೆ

ಖಾರ್ಕಿವ್ ಮತ್ತು ಇತರ ಹತ್ತಿರದ ನಗರಗಳಿಂದ ಭಾರತಿಯರನ್ನು ಸುರಕ್ಷಿತವಾಗಿ ಕರೆ ತರುವ ಸಂಬಂಧ ಭಾರತ, ರಷ್ಯಾದ ಜತೆ ಸಂವಹನ ನಡೆಸುತ್ತಿದೆ. ರಷ್ಯಾದಿಂದ ಪಡೆದ ಮಾಹಿತಿ ಆಧಾರದ ಮೇಲೆ ನಮ್ಮ ರಾಯಭಾರ ಕಚೇರಿಯಿಂದ ಸಲಹೆ ನೀಡಲಾಗಿದೆ ಎಂದರು. ಕಾಲ್ನಡಿಗೆ ಮತ್ತು ಸುರಕ್ಷತೆ ಗಮನದಲ್ಲಿಟ್ಟುಕೊಂಡು ಲಭ್ಯವಿರುವ ಯಾವುದೇ ವಿಧಾನಗಳನ್ನು ಬಳಸಿಕೊಂಡು ಖಾರ್ಕಿವ್ ನಿಂದ ತಕ್ಷಣ ಸುರಕ್ಷಿತ ವಲಯಗಳಿಗೆ ಅಥವಾ ಇನ್ನಷ್ಟು ಪಶ್ಚಿಮಕ್ಕೆ ತೆರಳುವಂತೆ ಎಲ್ಲಾ ಭಾರತೀಯ ಪ್ರಜೆಗಳಿಗೆ ಸೂಚಿಸಲಾಗಿದೆ ಎಂದೂ ಬಾಗ್ಚಿ ತಿಳಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button