Breaking NewsLatestಜಿಲ್ಲಾ ಸುದ್ದಿರಾಜ್ಯರಾಮನಗರಸುದ್ದಿ

ಮನೆ ಬಾಗಿಲಿಗೆ ಬಂದೇ ಬಿಡ್ತು ಕಂದಾಯ ದಾಖಲೆ!

ರಾಮನಗರ: ಸರ್ಕಾರದ  ಮಹತ್ವಾಕಾಂಕ್ಷಿ ಯೋಜನೆಯಾದ ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಗೆ ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಅವರು‌ ಇಂದು ರಾಮನಗರ ತಾಲ್ಲೂಕಿನ ಮಾದಾಪುರ ಗ್ರಾಮದಲ್ಲಿ‌ ಚಾಲನೆ ನೀಡಿದರು. ಚಾಲನೆ ನೀಡಿದ ನಂತರ ಮಾತನಾಡಿದ ಅವರು ಪಿ.ಎಂ.ಕಿಶಾನ್ ಯೋಜನೆಯಡಿ ನೊಂದಣಿ ಮಾಡಿಕೊಂಡಿರುವವರಿಗೆ ಉಚಿತವಾಗಿ ಆರ್.ಟಿ.ಸಿ, ಅಟ್ಲಾಸ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು   ನೀಡಲಾಗುತ್ತಿದೆ. ಉಳಿದ ಗ್ರಾಮಸ್ಥರು ಗೊಂದಲಕ್ಕೆ ಒಳಗಾಗಬಾರದು. ಮಾರ್ಚ್ 21 ರಿಂದ 26 ರವರೆಗೆ ಒಂದು ವಾರಗಳ ಕಾಲ ಉಚಿತವಾಗಿ ದಾಖಲೆಗಳನ್ನು ನಾಡ ಕಚೇರಿಯಲ್ಲಿ ನೀಡಲಾಗುವುದು ಎಂದರು.

ಕಂದಾಯ ದಾಖಲೆ ಮನೆ ಬಾಗಿಲಿಗೆ ಜನಸ್ನೇಹಿ ಕಾರ್ಯಕ್ರಮವಾಗಿದ್ದು, ವರ್ಷಕ್ಕೆ ಒಂದು ಬಾರಿಯಾದರೂ ರೈತರು ತಮ್ಮ ದಾಖಲೆ ಪಡೆಯಲು ಸರ್ಕಾರಿ ಕಚೇರಿಗೆ ತೆರಳದೆ ಆಡಳಿತ ವರ್ಗವೇ ಅವರ ಮನೆಗೆ ತೆರಳಿ ಉಚಿತವಾಗಿ ದಾಖಲೆಗಳನ್ನು  ನೀಡಲಿದೆ. ಇದರಿಂದ ರೈತರು ತಮ್ಮ ದಾಖಲೆಯನ್ನು‌ ಪರಿಶೀಲಿಸಿಕೊಳ್ಳಬಹುದು. ಜಿಲ್ಲೆಯಲ್ಲಿರುವ 823 ಕಂದಾಯ ಗ್ರಾಮಗಳಲ್ಲಿ ರೈತರ ಮನೆ ಬಾಗಿಲಿಗೆ ದಾಖಲೆಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ಕಂದಾಯ ಇಲಾಖೆ 54 ವಿವಿಧ ಸೇವೆಯನ್ನು ಜನರಿಗೆ ಒದಗಿಸುತ್ತದೆ. ಗ್ರಾಮೀಣ ಜನರು ಹಾಗೂ ರೈತರಿಗೆ ಉತ್ತಮ ಹಾಗೂ ಪಾರದರ್ಶಕ ಸೇವೆ ನೀಡಲು ಕಂದಾಯ ಇಲಾಖೆ ವಿನೂತನ ಯೋಜನೆಗಳನ್ನು ಜಾರಿಗೆ ತಂದಿದೆ. ಜನರ ಕುಂದು ಕೊರತೆಗಳನ್ನು ಆಲಿಸಿ ಪರಿಹಾರ ನೀಡಲು ತಿಂಗಳಿನ ಮೂರನೇ ಶನಿವಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ, ಸಾಮಾಜಿಕ ಪಿಂಚಣಿಗಳನ್ನು ಅವರ ಮನೆ ಬಾಗಿಲಿಗೆ ನೀಡಲು ನವೋದಯ ಆ್ಯಪ್ ಸೇವೆ. ಈ ಹಿಂದೆ ಆರ್.ಟಿ.ಸಿಯನ್ನು  ಲಿಖಿತ ರೂಪದಲ್ಲಿ ನೀಡಲಾಗುತ್ತಿತ್ತು. ಇಂದು ಗಣಕೀಕೃತ ರೂಪದಲ್ಲಿ ನೀಡಲಾಗುತ್ತಿದೆ. ಸಾರ್ವಜನಿಕರಿಗೆ ಕಡಿಮೆ ಸಮಯದಲ್ಲಿ ಸೇವೆ ನೀಡಲು ಎಲ್ಲಾ ರೀತಿಯಲ್ಲೂ ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.

ಪೋಡಿ ದುರಸ್ತಿ, ಅರಣ್ಯ ಜಮೀನು ಡಿನೋಟಿಫಿಕೇಷನ್ ಸೇರಿದಂತೆ ಕೆಲವು ಸಮಸ್ಯೆಗಳಿವೆ. ಹಂತ ಹಂತವಾಗಿ ಅವುಗಳನ್ನು ಪರಿಹರಿಸಲಾಗುವುದು ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ರಾಮನಗರ ತಹಶೀಲ್ದಾರ್ ವಿಜಯ್ ಕುಮಾರ್, ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರಕಾಶ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶೋಭ, ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶ್ ಮೂರ್ತಿ‌ ಉಪಸ್ಥಿತರಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button