ಚತುಷ್ಪಥ ಹೆದ್ದಾರಿ ನಿಮಾ೯ಣ ಇಲ್ಲ: ಪ್ರತಾಪ್ ಸಿಂಹ

ಮಡಿಕೇರಿ : ಮೈಸೂರಿನಿಂದ ಕುಶಾಲನಗರದವರೆಗೆ 4 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ 4 ಪಥದಹೆದ್ದಾರಿ ನಿರ್ಮಿಸಲಾಗುತ್ತಿದೆ. ಆದರೆ ಕುಶಾಲನಗರದಿಂದ ಸಂಪಾಜೆಯವರೆಗೆ ಭೂಕುಸಿತ, ಪರಿಸರ ರಕ್ಷಣೆ ಮನದಲ್ಲಿರಿಸಿಕೊಂಡು ಹೆದ್ದಾರಿ ವಿಸ್ತರಣೆ ಮಾಡಲಾಗುತ್ತಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಂಟಿಕೊಪ್ಪ ಮತ್ತು ಮಡಿಕೇರಿಯಲ್ಲಿ ವಾಹನ ದಟ್ಟಣೆ ಗಮನಿಸಿ ಬೈಪಾಸ್ ನಿಮಾ೯ಣಕ್ಕೆ ಚಿಂತನೆ ನಡೆಸಲಾಗಿದೆ. ಮಡಿಕೇರಿಯ ಅರಣ್ಯ ಭವನದಿಂದ ಭಾಗಮಂಡಲಕ್ಕೆ ತೆರಳುವ ರಸ್ತೆ ಜಂಕ್ಷನ್ ವರೆಗೆ ಬೈಪಾಸ್ ಬಗ್ಗೆ ಸದ್ಯದಲ್ಲಿಯೇ ಪರಿಶೀಲನೆ ನಡೆಸಲಾಗುವುದು ಎಂದರು.
ಕುಶಾಲನಗರದಿಂದ ಸಂಪಾಜೆಯವರೆಗೆ ವಾಹನ ಸಂಚಾರ ಸುಗಮಗೊಳಿಸಲು ರಸ್ತೆ ಬದಿ ಅಗಲಿಕರಣ ಮಾತ್ರ ಮಾಡಲಾಗುತ್ತದೆ.ಇದಕ್ಕೆ ಪರಿಸರ ಹಾನಿಯಾಗುತ್ತದೆ ಎಂಬ ಅನಗತ್ಯ ಅಪಪ್ರಚಾರ ಮಾಡದಿರಿ. ಪರಿಸರ ರಕ್ಷಣೆಯೊಂದಿಗೇ ಕೊಡಗಿನ ಅಭಿವೃದ್ಧಿ ಕೈಗೊಳ್ಳಲಾಗುತ್ತದೆ ಎಂದರು.ಇನ್ನು ಕೆಲವೇ ದಿನಗಳಲ್ಲಿ ಮೈಸೂರು – ಕುಶಾಲನಗರ ನಡುವಿನ ಚತುಷ್ಪಧ ಹೆದ್ದಾರಿ ಕಾಮಗಾರಿಗೆ ಚಾಲನೆ ಅವರು ತಿಳಿಸಿದರು.
