ರಾಷ್ಟ್ರವ್ಯಾಪಿ ಮುಷ್ಕರ ಬೆಂಬಲಿಸಿ ಕಲಬುರಗಿ ಕಾರ್ಮಿಕರಿಂದ ಬೃಹತ್ ಮೆರವಣಿಗೆ

ಕಲಬುರಗಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಒಕ್ಕೂಟ ಕರೆ ನೀಡಿರುವ ರಾಷ್ಟ್ರ ವ್ಯಾಪಿ ಮುಷ್ಕರ ಬೆಂಬಲಿಸಿ ಕಲಬುರಗಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ನಗರದ ಕೇಂದ್ರ ಬಸ್ ನಿಲ್ದಾಣದಿಂದ ಆರಂಭವಾದ ಮೆರವಣಿಗೆ ಎಸ್ ವಿ ಪಿ ವೃತ್ತ, ಡಿಸಿ ಕಚೇರಿ ಮಾರ್ಗವಾಗಿ ಜಗತ್ ವೃತ್ತದಲ್ಲಿ ಸಮಾವೇಶಗೊಂಡಿತು. ಮೆರವಣಿಗೆಯುದ್ದಕ್ಕೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರ ಒಂದು ಕಡೆ ಕಾರ್ಪೋರೇಟ್ ಕಂಪನಿಗಳ ಪರವಾಗಿ ಕಾರ್ಯನಿರ್ವಹಿಸುತ್ತಿದೆ. ಇನ್ನೊಂದು ಕಡೆ ಅಡುಗೆ ಅನಿಲ ದರ, ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮಾಡುವ ಮೂಲಕ ಬಡ ಹಾಗೂ ಕೂಲಿ ಕಾರ್ಮಿಕರ ಬದುಕಿಗೆ ಬರೆ ಎಳೆಯುತ್ತಿದೆ ಎಂದು ಆರೋಪಿಸಿದರು.
ಬೆಲೆ ಏರಿಕೆ ನಿಯಂತ್ರಣ, ಕನಿಷ್ಟ ವೇತನ ಜಾರಿ, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆ, ಸಾರ್ವಜನಿಕ ವಲಯದ ಖಾಸಗೀಕರಣ ತಡೆಯುವುದು ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳ ಈಡೇರಿಸುವಂತೆ ಹಾಗೂ ಕೇಂದ್ರ ಸರ್ಕಾರ ಜನ ವಿರೋಧಿ ನೀತಿಯನ್ನು ಕೈ ಬಿಟ್ಟು, ಅಗತ್ಯ ವಸ್ತುಗಳ ಬೆಲೆ ಕಡಿಮೆಗೊಳಿಸಬೇಕು ಹಾಗೂ ರೈತ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದರು.
