₹75 ಸಾವಿರ ಕೋಟಿ ಯೋಜನೆಗೆ ಚಾಲನೆ ನೀಡಿದ ಮೋದಿ

ನಾಗ್ಪುರ: ಪ್ರಧಾನಿ ನರೇಂದ್ರ ಮೋದಿ ₹75 ಸಾವಿರ ಕೋಟಿ ಮೊತ್ತದ ವಿವಿಧ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗೆ ಭಾನುವಾರ ಚಾಲನೆ ನೀಡಿದ್ದಾರೆ.
ನಾಗ್ಪುರ-ಶಿರಡಿ ನಡುವೆ ಸಂಪರ್ಕ ಬೆಸೆಯುವ ‘ಸಮೃದ್ಧಿ ಮಹಾಮಾರ್ಗ’ ಯೋಜನೆಗೆ ಚಾಲನೆ ನೀಡಿದ ಮೋದಿ, ಬಳಿಕ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
ನೂತನ ಸರ್ಕಾರ ಅಭಿವೃದ್ಧಿ ಯೋಜನೆಗಳನ್ನು ಗಂಭೀರವಾಗಿ ತೆಗೆದುಕೊಂಡಿದ್ದು ಸುಭಿಕ್ಷ ರಾಜ್ಯಕ್ಕೆ ಮುನ್ನುಡಿ ಬರೆಯುತ್ತಿದೆ. ಡಬ್ಬಲ್ ಎಂಜಿನ್ ಸರ್ಕಾರ ದೇಶದ ಒಟ್ಟಾರೆ ಅಭಿವೃದ್ಧಿಗೆ ದೀರ್ಘ ದೃಷ್ಟಿಕೋನ ಹೊಂದಿದೆ.
ಗುಜರಾತ್ ಚುನಾವಣೆ ಫಲಿತಾಂಶ ದೇಶವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಈಗಿನ ಸರ್ಕಾರದ ದೀರ್ಘಾವಧಿ ದೃಷ್ಟಿಕೋನಕ್ಕೆ ಸಿಕ್ಕ ಜಯ ಎಂದರು.
ವಿರೋಧ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿ, ನಮ್ಮ ರಾಜಕೀಯದಲ್ಲಿ ಆದಾಯಕ್ಕಿಂತ ಖರ್ಚು ಹೆಚ್ಚು ಎಂಬ ತತ್ವವನ್ನು ಅನುಸರಿಸಿದರೆ ದೇಶದ ಆರ್ಥಿಕ ಮಂಕಾಗುತ್ತದೆ. ಮತದಾರರಿಗೆ ಹಿಂದಿನ ಸರ್ಕಾರಗಳ ಅಸಲಿತನ ಗೊತ್ತಾಗಿದೆ. ದೇಶದ ಆರ್ಥಿಕತೆಯನ್ನು ಹಾನಿಗೊಳಿಸಲು ಯತ್ನಿಸಿದ್ದು ತಿಳಿದಿದೆ. ಹೀಗಾಗಿ ಜನ ನಮ್ಮ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ ಎಂದರು.
