Breaking NewsLatestರಾಷ್ಟ್ರೀಯಸುದ್ದಿ
ರಾಜ್ಯಗಳಿಗೆ ಬಾಕಿ ಇರುವ ಜಿಎಸ್ಟಿ ಪರಿಹಾರ ಶೀಘ್ರ ಬಿಡುಗಡೆ

ನವದೆಹಲಿ: ರಾಜ್ಯಗಳಿಗೆ ಬಾಕಿ ಇರುವ ಜಿಎಸ್ಟಿ ಪರಿಹಾರವನ್ನು ಅಕೌಂಟೆಂಟ್ ಜನರಲ್ ದೃಢೀಕರಿಸಿದ ಕೂಡಲೇ ಬಿಡುಗಡೆ ಮಾಡಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಅಕೌಂಟೆಂಟ್ ಜನರಲ್ ದೃಢೀಕರಿಸಿದ ಪ್ರಮಾಣಪತ್ರವನ್ನು ರಾಜ್ಯಗಳು ಸಲ್ಲಿಸದೇ ಹೋದಲ್ಲಿ ಅಥವಾ ವಿಳಂಬ ಮಾಡಿದಲ್ಲಿ ಪರಿಹಾರ ಬಿಡುಗಡೆ ವಿಳಂಬವಾಗಲಿದೆ ಎಂದು ಅವರು ಹೇಳಿದ್ದಾರೆ. ಲೋಕಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ.
ಅಕೌಂಟೆಂಟ್ ಜನರಲ್ಗಳು ರಾಜ್ಯಗಳ ಪರಿಹಾರ ಬೇಡಿಕೆಯನ್ನು ದೃಢೀಕರಿಸದಿದ್ದಲ್ಲಿ ಅವರು ಆ ಕೆಲಸವನ್ನು ತ್ವರಿತಗೊಳಿಸಬೇಕು. ಪ್ರಮಾಣಪತ್ರ ದೊರೆತ ಕೂಡಲೇ ಅದನ್ನು ಪರಿಶೀಲಿಸಿ ಅನುಮೋದನೆ ನೀಡಲು ನಾನು ಸಿದ್ಧವಿದ್ದೇನೆ. 2022ರ ಜೂನ್ವರೆಗೆ ರಾಜ್ಯಗಳಿಗೆ ಐದು ವರ್ಷಗಳ ಅವಧಿಯ ಜಿಎಸ್ಟಿ ಪರಿಹಾರ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ. ಜೂನ್ನ ಅರ್ಧದಷ್ಟು ಪರಿಹಾರವನ್ನು ಕಳೆದ ತಿಂಗಳು ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
