ಸಂಸತ್ ಚಳಿಗಾಲದ ಅಧಿವೇಶನ ನ.29ರಿಂದ ಡಿ.23ರವರೆಗೆ

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ನ.29ರಿಂದ ಡಿ.23ರವರೆಗೆ ನಡೆಯಲಿದೆ. ಕಳೆದ ಒಂದೂವರೆ ವರ್ಷದಲ್ಲಿ ನಡೆದ ಅಧಿವೇಶನಗಳಂತೆ ಮುಂಬರುವ ಅಧಿವೇಶವೂ ಕೋವಿಡ್ ನಿಯಮಾವಳಿಗಳಿಗೆ ಬದ್ಧವಾಗಿಯೇ ಇರಲಿದೆ.
ಸೋಮವಾರ ನಡೆದ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿದೆ.
ಕಳೆದ ವರ್ಷ ಕೋವಿಡ್ ಕಾರಣದಿಂದಾಗಿ ಚಳಿಗಾಲದ ಅಧಿವೇಶನ ನಡೆದಿರಲಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಬಜೆಟ್ ಮತ್ತು ಮುಂಗಾರು ಅಧಿವೇಶನಗಳೂ ಮೊಟಕುಗೊಂಡಿದ್ದವು.
ಹಣದುಬ್ಬರ, ಕಾಶ್ಮೀರದಲ್ಲಿ ನಾಗರಿಕರ ಮೇಲೆ ಉಗ್ರಗಾಮಿಗಳ ದಾಳಿ, ಲಖಿಂಪುರ ಖೇರಿ ಹಿಂಸಾಚಾರ ಮತ್ತು ಕೇಂದ್ರ ಸರ್ಕಾರ ಅಂಗೀಕರಿಸಿದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆ ಇವೇ ಮೊದಲಾದ ವಿಚಾರಗಳನ್ನು ಇಟ್ಟುಕೊಂಡು ಮೋದಿ ಸರ್ಕಾರದ ವಿರುದ್ಧ ಹರಿಹಾಯಲು ಪ್ರತಿಪಕ್ಷಗಳು ಸಜ್ಜಾಗಿದ್ದು, ಅಧಿವೆಶನದಲ್ಲಿ ಕೋಲಾಹಲವೇಳುವ ಸಾಧ್ಯತೆಯಿದೆ.
ಈ ವರ್ಷದ ಮುಂಗಾರು ಅಧಿವೇಶನದಲ್ಲಿ ಪೆಗಾಸಸ್ ಗೂಢಚರ್ಯೆ ವಿಚಾರ ಮತ್ತು ಕೇಂದ್ರದ ಮೂರು ಕೃಷ್ಇ ಕಾಯ್ದೆಗಳ ಸಂಬಂಧ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದ್ದವು. ಪ್ರತಿಭಟನೆಯ ಕಾರಣದಿಂದಾಗಿ ನಿಗದಿತ ಅವಧಿಗಿಂತ ಮೊದಲೇ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು.
