ಇನ್ಫೋಸಿಸ್ ಬಳಿಕ ಅಮೆಜಾನ್ ವಿರುದ್ಧ ಪಾಂಚಜನ್ಯ ಬರಹ; ‘ಈಸ್ಟ್ ಇಂಡಿಯಾ ಕಂಪನಿ 2.0’ ಎಂಬ ಟೀಕೆ

ನವದೆಹಲಿ: ಇನ್ಫೋಸಿಸ್ ವಿರುದ್ಧ ಸುದೀರ್ಘ ಬರಹದ ಮೂಲಕ ಹರಿಹಾಯ್ದಿದ್ದ ಪಾಂಚಜನ್ಯ ನಿಯತಕಾಲಿಕೆ ಇದೀಗ ಮತ್ತೊಂದು ವಿವಾದಾತ್ಮಕ ಕವರ್ ಸ್ಟೋರಿ ಬರೆದಿದ್ದು, ಇ-ಕಾಮರ್ಸ್ ದೈತ್ಯ ಅಮೆಜಾನ್ನ್ನು ‘ಈಸ್ಟ್ ಇಂಡಿಯಾ ಕಂಪನಿ 2.0’ ಎಂದು ಟೀಕಿಸಿದೆ.
ಆರ್ಎಸ್ಎಸ್ನ ಮುಖವಾಣಿ ಎಂದೇ ಗುರುತಿಸಲ್ಪಟ್ಟಿರುವ ಪಾಂಚಜನ್ಯ ನಿಯತಕಾಲಿಕೆಯ ಸಂಪಾದಕ ಹಿತೇಶ್ ಶಂಕರ್, ಕವರ್ ಸ್ಟೋರಿಯ ಚಿತ್ರವನ್ನು ಸೋಮವಾರ ಟ್ವೀಟ್ ಮಾಡಿದ್ದಾರೆ. ಬರಹದ ಶೀರ್ಷಿಕೆಯಲ್ಲಿಯೇ ಅಮೆಜಾನ್ ವಿರುದ್ಧ, ಈಸ್ಟ್ ಇಂಡಿಯಾ ಕಂಪನಿ 2.0 ಎಂದು ಹೇಳಿದೆ.
ಅಮೆಜಾನ್ ಭಾರತದಲ್ಲಿನ ಅಧಿಕಾರಿಗಳಿಗೆ ಲಂಚ ನೀಡಿದೆ ಎಂಬಿತ್ಯಾದಿ ಆರೋಪಗಳನ್ನು ಸೇರಿಸಿ ಈ ಕವರ್ ಸ್ಟೋರಿ ಸಿದ್ಧಪಡಿಸಲಾಗಿದೆ. ಅಮೆಜಾನ್ ಕಾನೂನು ಶುಲ್ಕಕ್ಕೆ 8,500 ಕೋಟಿ ವೆಚ್ಚ ಮಾಡಿದ್ದು, ಆ ಹಣ ಎಲ್ಲಿ ಹೋಗಿದೆ ಎಂಬುದನ್ನು ತನಿಖೆ ಮಾಡಲಾಗುವುದು ಎಂದು ಹೆಸರು ಹೇಳಲಿಚ್ಛಿಸದ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದು ಕಳೆದ ವಾರವಷ್ಟೇ ಸುದ್ದಿಯಾಗಿತ್ತು.
ಇದೇ ವೇಳೆ, ಭ್ರಷ್ಟಾಚಾರ ಆರೋಪದ ವಿರುದ್ಧ ತಾನೂ ಆಂತರಿಕ ತನಿಖೆ ನಡೆಸುವುದಾಗಿ ಅಮೆರಿಕಾ ಮೂಲದ ಅಮೆಜಾನ್ ಪ್ರಕಟಿಸಿತ್ತು.
ಇದೇ ತಿಂಗಳ ಆರಂಭದಲ್ಲಿ ಇನ್ಫೋಸಿಸ್ ವಿರುದ್ಧ ಪಅಂಚಜನ್ಯ ಬರೆದಾಗ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಪಾಂಚಜನ್ಯಕ್ಕೂ ತನಗೂ ಸಂಬಂಧವಿಲ್ಲವೆಂದು ಆರ್ಎಸ್ಎಸ್ ಹೇಳುವಲ್ಲಿಯವರೆಗೂ ಅದು ಹೋಗಿತ್ತು.
