ಹಳೇ ಹುಬ್ಬಳ್ಳಿ ಕಲ್ಲು ತೂರಾಟ ಪ್ರಕರಣ: ಮಾಸ್ಟರ್ ಮೈಂಡ್ನ ಹಡೆಮುರಿ ಕಟ್ಟಿದ ಪೊಲೀಸರು

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಗಲಭೆಯ ನಂತರ ಪರಾರಿಯಾಗಿ ಬೆಳಗಾವಿಯಲ್ಲಿ ತಲೆ ಮರೆಸಿಕೊಂಡಿದ್ದ ಪ್ರಕರಣದ ಮಾಸ್ಟರ್ ಮೈಂಡ್ ವಸೀಂ ಪಠಾಣ್ನನ್ನು ಹುಬ್ಬಳ್ಳಿಯ ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧನದ ಬಳಿಕ ಬೆಳಗಾವಿಯಿಂದ ನೇರವಾಗಿ ಹುಬ್ಬಳ್ಳಿಗೆ ಕರೆತಂದ ಪೊಲೀಸರು, ಕಳೆದ ದಿನ ತಡ ರಾತ್ರಿಯವರೆಗೂ ಆರೋಪಿಯನ್ನು ತೀವ್ರ ವಿಚಾರಣೆ ನಡೆಸಿದ್ದಾರೆ.
ಬಳಿಕ ತಡ ರಾತ್ರಿಯೇ ವಸೀಂನನ್ನು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಕಳೆದ ಮಧ್ಯಾಹ್ನ ಬಂಧಿತನಾಗಿದ್ದ ಆರೋಪಿಯನ್ನು ಕಮಿಷನರ್ ಹಾಗೂ ಇಬ್ಬರು ಡಿಸಿಪಿಗಳ ಮಧ್ಯದಲ್ಲಿ ತೀವ್ರ ವಿಚಾರಣೆ ನಡೆಸಿದ್ದು, ಪ್ರಕರಣದ ಹಲವು ಸಂಗತಿಗಳ ಕುರಿತು ವಸೀಂ ಎಳೆ ಎಳೆಯಾಗಿ ಪೊಲೀಸರ ಮುಂದೆ ತೆರೆದಿಟ್ಟಿದ್ದಾನೆ ಎಂದು ಹೇಳಲಾಗಿದೆ.
ಗಲಾಟೆಗೂ ಮುನ್ನ ಜನರನ್ನು ಪ್ರತಿಭಟನೆಗೆಂದು ಕರೆದಿರುವ ವಿಚಾರ, ಹಾಗೂ ವಾಟ್ಸ್ ಆ್ಯಪ್ ಗ್ರೂಪ್ ಕುರಿತು ಪೊಲೀಸರಿಗೆ ವಿವರಣೆ ನೀಡಿದ್ದಾನೆ ಎಂದು ತಿಳಿದು ಬಂದಿದೆ. ಸದ್ಯ ತೀವ್ರ ವಿಚಾರಣೆ ಬಳಿಕ ಹಳೇ ಹುಬ್ಬಳ್ಳಿಯ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಮಾಸ್ಟರ್ ಮೈಂಡ್ ವಾಸೀಂ ಪಠಾಣ್ನನ್ನು ಹುಬ್ಬಳ್ಳಿಯ ಸಬ್ ಜೈಲಿಗೆ ಶಿಫ್ಟ್ ಮಾಡಿದ್ದಾರೆ. ಇಂದು ಮತ್ತೆ ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ತಮ್ಮ ಕಸ್ಟಡಿಗೆ ಕೇಳುವ ಸಾಧ್ಯತೆ ಇದ್ದು, ಮಾಸ್ಟರ್ ಮೈಂಡ್ಗೆ ಈಗ ನಡುಕ ಆರಂಭವಾಗಿದೆ.
