ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ: ಅಜ್ಞಾತ ಸ್ಥಳದಲ್ಲಿ ಕುಳಿತು ವಿಡಿಯೋ ಹರಿಬಿಟ್ಟ ಮಾಸ್ಟರ್ ಮೈಂಡ್ ಮೌಲಾನಾ!

ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಆವರಣದಲ್ಲಿ ಎಪ್ರಿಲ್ 16 ಶನಿವಾರ ರಾತ್ರಿ ನಡೆದ ಕಲ್ಲು ತೂರಾಟದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಸ್ಟರ್ ಮೈಂಡ್ ಎಂದು ಬಿಂಬಿತನಾಗಿದ್ದ ಮೌಲಾನಾ ವಾಸಿಂ ಪಠಾಣ್ ಹೇಳಿಕೆಯ ವಿಡಿಯೋವಂದನ್ನು ಬಿಡುಗಡೆ ಮಾಡಿದ್ದಾನೆ.
ವೀಡಿಯೋದಲ್ಲಿ ಮಾತನಾಡಿರುವ ವಾಸಿಂ ಪಠಾಣ್, ಹುಬ್ಬಳ್ಳಿಯಲ್ಲಿ ದೊಡ್ಡ ಘಟನೆ ನಡೆದಿದೆ. ಈ ಕುರಿತು ಮಾತನಾಡಲು ನಿಮ್ಮ ಮುಂದೆ ಬಂದಿದ್ದೇನೆ. ಇಸ್ಲಾಂ ಧರ್ಮಕ್ಕೆ ಅಪಮಾನ ಮಾಡಿದ ಬಗ್ಗೆ ಮುಸ್ಲಿಂ ಯುವಕರಲ್ಲಿ ಅಸಮಾಧಾನ ಇತ್ತು. ಈ ಕುರಿತು ದೂರು ನೀಡಲು ಹಲವಾರು ಯುವಕರು ಅಲ್ಲಿ ಜಮಾಯಿಸಿದ್ದರು. ಜನರ ಜೊತೆಗೆ ಮಾತನಾಡಲು ನನ್ನನ್ನು ಕರೆಸಿದ್ದರು. ಪೊಲೀಸರ ಜೊತೆಗೆ ಮಾತನಾಡಿದೆ.
ಪೊಲೀಸರು ಸಹಕಾರ ಕೊಟ್ಟಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಪೊಲೀಸರೇ ಜೀಪ್ ಹತ್ತಿ ಜನರಿಗೆ ತಿಳಿ ಹೇಳಲು ಹೇಳಿದರು. ನಾನು ವಾಹನದ ಮೇಲೆ ಹತ್ತಿದಾಗ ಅಲ್ಲಿ ಮೈಕ್ ಇರಲಿಲ್ಲ. ಹೀಗಾಗಿ ಕೈ ಸನ್ನೆ ಮಾಡುವ ಮೂಲಕ ಶಾಂತಿ ಕಾಪಾಡಲು ತಿಳಿಸಿದೆ ಎಂದಿದ್ದಾರೆ.
ಆದರೆ ನಾನೇ ಅದರ ಪಿತೂರಿದಾರ ಎಂದು ಬಿಂಬಿತಗೊಳ್ಳುತ್ತಿದೆ. ನಾನು ಘಟನೆಯ ಮಾಸ್ಟರ್ ಮೈಂಡ್ ಅಲ್ಲ.
ನನ್ನ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ. ಹುಬ್ಬಳ್ಳಿಯ ವಾತಾವರಣ ಹದಗೆಡಿಸುವ ಉದ್ದೇಶ ನನ್ನದಾಗಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರುದ್ಧ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಪೊಲೀಸ್ ಇಲಾಖೆಯ ಬಗ್ಗೆ ನನಗೆ ಭರವಸೆ ಇದೆ. ಪೊಲೀಸರ ಮುಂದೆ ಹಾಜರಾಗಿ ನನ್ನ ಹೇಳಿಕೆ ಕೊಡುತ್ತೇನೆ. ಸತ್ಯಕ್ಕೆ ನ್ಯಾಯ ಸಿಗುತ್ತದೆ ಎಂದು ನಂಬಿದ್ದೇನೆ. ಜನರನ್ನು ನಿಯಂತ್ರಿಸುವ ಕಾರ್ಯ ಮಾಡಿದೆ.
ನನ್ನನ್ನು ಸಿಕ್ಕಿಸಿ ಹಾಕಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂದು ವಾಸಿಂ ಪಠಾಣ್ ಆರೋಪ ಮಾಡಿದ್ದಾರೆ. ನಾನು ಪೊಲೀಸರ ಮುಂದೆ ಹಾಜರಾಗಬೇಕು ಅಂತ ಇದ್ದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಹರದಾಡಿರುವ ಸುದ್ದಿಯಿಂದ ನಮ್ಮ ಮನೆಯವರು ಶರಣಾಗದಂತೆ ಹೇಳಿದರು. ಆದರೆ ಈಗ ನನ್ನ ಮೇಲೆ ಆರೋಪಗಳ ಸುರಿಮಳೆ ಹರಿದು ಬರುತ್ತಿವೆ. ನಾನು ತಪ್ಪು ಮಾಡಿದರೇ ಶಿಕ್ಷೆ ಕೊಡಲಿ ಎಂದು ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ.
