ರಾಜೀನಾಮೆ ಪ್ರಶ್ನೆಯೇ ಇಲ್ಲ; ವರಿಷ್ಠರು ಸೂಚಿಸಿಯೂ ಇಲ್ಲ; ಶಾ, ನಡ್ಡಾ ಭೇಟಿ ಬಳಿಕ ಬಿಎಸ್ವೈ ಸ್ಪಷ್ಟನೆ

ನವದೆಹಲಿ: ಸಿಎಂ ಸ್ಥಾನಕ್ಕೆ ತಾವು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಹಬ್ಬಿದ್ದ ಊಹಾಪೋಹಗಳನ್ನು ತಳ್ಳಿಹಾಕಿದ್ದಾರೆ.
ಗೃಹಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ವರಿಷ್ಠರು ತನ್ನ ರಾಜೀನಾಮೆ ಕೇಳಿಲ್ಲ. ನಾನು ರಾಜಿನಾಮೆ ನೀಡುತ್ತೇನೆ ಎಂಬುದು ಶುದ್ಧ ಸುಳ್ಳು ಎಂದರು.
ಊಹಾಪೋಹಗಳಿಗೆ ಪ್ರತಿಕ್ರಿಯಿಸುವ ಅಗತ್ಯ ಇಲ್ಲ. ರಾಜಿನಾಮೆಗೆ ಯಾರೂ ಸೂಚಿಸಿಲ್ಲ. ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಹೊಣೆ ತಮ್ಮ ಮೇಲಿದೆ. ತಮ್ಮ ಶ್ರಮ, ಸಾಧನೆ ಕುರಿತು ಪಕ್ಷ ವರಿಷ್ಠರಿಂದ ಮೆಚ್ಚುಗೆ ವ್ಯಕ್ತವಾಗಿದೆ ಎಂದೂ ಅವರು ಹೇಳಿದರು.
ಇನ್ನು ಮುಂದೆ ತಿಂಗಳಿಗೊಮ್ಮೆ ದೆಹಲಿಗೆ ಭೇಟಿ ನೀಡುವ ವರಿಷ್ಠರ ಸೂಚನೆಯಂತೆ ಪಕ್ಷ ಸಂಘಟನೆಗೆ ಒತ್ತು ನೀಡುವುದರ ಜತೆಗೆ ಅಭಿವೃದ್ಧಿಪರ ಸರ್ಕಾರ ನಡೆದುವ ಎಂದ ವಿಶ್ವಾಸ ವ್ಯಕ್ತಪಡಿಸಿದರು.
ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಿಪಡಿಸುವುದು ಸರಿಯಲ್ಲ. ಯೋಜನೆ ಅನುಷ್ಠಾನದಿಂದ ತಮಿಳುನಾಡಿಗೆ ಯಾವುದೇ ತೊಂದರೆ ಇಲ್ಲ. ಈ ಕುರಿತು ಸಂಬಂಧಿಸಿದವರಿಗೆ ಮನವರಿಕೆ ಮಾಡಿ ಯೋಜನೆಗೆ ಶೀಘ್ರ ಚಾಲನೆ ನೀಡಲಾಗುವುದು. ಎರಡೂ ರಾಜ್ಯಗಳು ಪರಸ್ಪರ ಸೋದರರಂತೆ ನಡೆದುಕೊಳ್ಳಬೇಕೆಂಬುದು ತಮ್ಮ ಆಶಯ. ಈ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳನ್ನು ಮಾಡುವೆ ಎಂದರು.
ಇದೇ ವೇಳೆ, ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಅವರನ್ನೂ ಬಿಎಸ್ ವೈ ಭೇಟಿ ಮಾಡಿದ್ದರು. ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಕುರಿತು ಊಹಾಪೋಹಗಳ ಸಂದರ್ಭದಲ್ಲಿ ಯಡಿಯೂರಪ್ಪ ಅವರ ದೆಹಲಿಯ ಈ ಭೇಟಿ ತೀರ್ವ ಮಹತ್ವ ಪಡೆದುಕೊಂಡಿತ್ತು.
