ವಿಜಯಪುರ ನೂತನ ಡಿಸಿ ಕಾರು ಅಪಘಾತ: ಐದು ಜನ ಖಾಸಗಿ ಆಸ್ಪತ್ರೆಗೆ ದಾಖಲು

ಧಾರವಾಡ: ಅಧಿಕಾರ ವಹಿಸಿಕೊಳ್ಳಲು ವಿಜಯಪುರಕ್ಕೆ ಕುಟುಂಬ ಸಮೇತ ಹೊರಟಿದ್ದ ಐಎಎಸ್ ಅಧಿಕಾರಿ ಮತ್ತು ಕುಟುಂಬವನ್ನೊಳಗೊಂಡ ಕಾರು ಪಲ್ಟಿಯಾದ ಘಟನೆ ಧಾರವಾಡ ತಾಲೂಕಿನ ಯರಿಕೊಪ್ಪದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ್ದು, ಪವಾಡಸದೃಶ್ಯ ರೀತಿಯಲ್ಲಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಐಎಎಸ್ ಅಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ್, ಪತ್ನಿ ಶ್ವೇತಾ, ಮಕ್ಕಳಾದ ತನ್ನಿ, ವಿಹಾನ್ ಹಾಗೂ ಪ್ರವೀಣಕುಮಾರ್ ಕಾರಿನಲ್ಲಿದ್ದರು. ಬೆಳಗಿನ ಜಾವ 5.30ಕ್ಕೆ ಈ ಘಟನೆ ನಡೆದಿದ್ದು, ಎಲ್ಲರನ್ನೂ ಎಸ್ಡಿಎಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ದಾವಣಗೆರೆ ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ವಿಜಯ ಮಹಾಂತೇಶ ದಾನಮ್ಮನವರ್ ಅವರ ವರ್ಗಾವಣೆ ಆದೇಶ ನಿನ್ನೆಯಷ್ಟೇ ಬಂದಿತ್ತುಎಂದು ತಿಳಿದು ಬಂದಿದೆ. ಸದ್ಯ ವಿಜಯಪುರ ಜಿಲ್ಲಾಧಿಕಾರಿಯಾಗಲು ಹೊರಟಿದ್ದ ಸಮಯದಲ್ಲಿಯೇ ಈ ದುರ್ಘಟನೆ ನಡೆದಿದ್ದು, ಅದೃಷ್ಟವಶಾತ್ ದೊಡ್ಡ ದುರಂತ ತಪ್ಪಿದಂತಾಗಿದೆ.
ಘಟನೆಯ ಸ್ಥಳಕ್ಕೆ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದ್ಯ ಅಪಘಾತವಾದ ಕಾರನ್ನು ಕ್ರೇನ್ ಸಹಾಯದೊಂದಿಗೆ ಮೇಲೆಕ್ಕೆ ಎತ್ತಿ ಬೇರೆಡೆಗೆ ಸಾಗಿಸಲಾಗಿದೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
