ಗುಜರಾತ್ ನಲ್ಲಿ ನಮೋ ರೋಡ್ ಶೋ: ಚುನಾವಣೆ ಪೂರ್ವ ತಯಾರಿ!

ದೆಹಲಿ: ಪಂಚರಾಜ್ಯ ಚುನಾವಣೆಗಳ ಫಲಿತಾಂಶ ಹೊರ ಬಿದ್ದಿದ್ದು, ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದು, ನಾಲ್ಕೂ ರಾಜ್ಯಗಳಲ್ಲಿ ಸರ್ಕಾರ ರಚಿಸಲು ಮುಂದಾಗಿದೆ. ಹೀಗಾಗಿ ಬಿಜೆಪಿ ಪಾಳೆಯದಲ್ಲೀಗ ಸಂಭ್ರಮ ಮುಗಿಲು ಮುಟ್ಟಿದೆ. ಬಿಜೆಪಿ ಅದ್ಭುತ ವಿಜಯ ಸಾಧಿಸಿದ ಕಾರಣ ದೆಹಲಿಯ ಬಿಜೆಪಿ ಪ್ರಧಾನ ಕಛೇರಿಯಲ್ಲಿ ನಮೋ ನಿನ್ನೆ ಕಾರ್ಯಕರ್ತರನ್ನ ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಇಂದು ಗುಜರಾತ್ಗೆ ಆಗಮಿಸಿರುವ ಪ್ರಧಾನಿ ಗುಜರಾತ್ ನಲ್ಲಿ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಪೂರ್ವ ತಯಾರಿಯ ರೂಪು ರೇಷೆ ನೀಡಲಿದ್ದಾರೆ.
ಹೀಗಾಗಿ ಎರಡು ದಿನಗಳ ಕಾಲ ಗುಜರಾತ್ ರಾಜ್ಯದಲ್ಲಿ ಮೋದಿ ಇರಲಿದ್ದಾರೆ. ಅಹ್ಮದಾಬಾದ್, ಬಳಿಕ ಗಾಂಧಿನಗರದ ಬಿಜೆಪಿ ರಾಜ್ಯ ಪ್ರಧಾನ ಕಛೇರಿ ಕಮಲಂವರೆಗೆ ರೋಡ್ ಶೋ ನಡೆಸಲಿದ್ದಾರೆ. ಸುಮಾರು 10 ಕಿಲೋ ಮೀಟರ್ ರೋಡ್ ಶೋ ಇದ್ದಾಗಿದ್ದು, ನಾಲ್ಕು ಲಕ್ಷಕ್ಕೂ ಅಧಿಕ ಜನ ಸೇರುವ ಅಂದಾಜಿದೆ. ಬಳಿಕ ಬಿಜೆಪಿ ರಾಜ್ಯ ಪ್ರಧಾನ ಕಚೇರಿಯಲ್ಲಿ ಶಾಸಕರು, ಸಂಸದರು, ಪದಾಧಿಕಾರಿಗಳು ಹಾಗೂ ರಾಜ್ಯ ಕಾರ್ಯಕಾರಿ ಸದಸ್ಯರೊಂದಿಗೆ ಸಂವಾದ ನಡೆಸಲಿದ್ದಾರೆ. ಅಹ್ಮದಬಾದ್ ನ ಜಿಎಂಡಿಸಿ ಮೈದಾನದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಸುಮಾರು ಒಂದು ಲಕ್ಷಕ್ಕೂ ಅಧಿಕ ಪ್ರತಿನಿಧಿಗಳು ಸೇರುವ ಸಾಧ್ಯತೆ ಇದೆ.
ಇನ್ನು ನಾಳೆ ಮಾರ್ಚ್ 12ನೇ ತಾರೀಖು ರಾಷ್ಟ್ರೀಯ ಡಿಫೆನ್ಸ್ ಯೂನಿವರ್ಸಿಟಿಯ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಭಾಷಣ ಮಾಡಲಿದ್ದಾರೆ. ಈ ಸಮಾರಂಭದಲ್ಲಿ ಗೃಹ ಸಚಿವ ಅಮಿತ್ ಶಾ ಕೂಡ ಇರಲಿದ್ದಾರೆ. ಇದಾದ ಬಳಿಕ ಸಂಜೆ, ಖೇಲ್ ಮಹಾಕುಂಭ ಸಮಾರಂಭಕ್ಕೆ ಚಾಲನೆ ನೀಡಲಿದ್ದಾರೆ. ಈ ಖೇಲ್ ಮಹಾಕುಂಭ ಕಾರ್ಯಕ್ರಮದಡಿ ರಾಜ್ಯಾದ್ಯಂತ ಸುಮಾರು 500 ಪ್ರದೇಶಗಳಲ್ಲಿ ವಿವಿಧ ಕ್ರೀಡಾಕೂಟಗಳು ನಡೆಯಲಿವೆ. ಈಗಾಗಲೇ 47ಕ್ಕೂ ಲಕ್ಷಕ್ಕೂ ಅಧಿಕ ಜನರು ನೋಂದಣಿ ಮಾಡಿಕೊಂಡಿದ್ದಾರೆ. ಅಂದಹಾಗೇ, ಈ ಖೇಲ್ ಮಹಾಕುಂಭ ಕಾರ್ಯಕ್ರಮ, ಕೇಂದ್ರ ಸರ್ಕಾರದ ಆಜಾದಿ ಕಾ ಅಮೃತಮಹೋತ್ಸವದ ಒಂದು ಭಾಗವೇ ಆಗಿದೆ.
