ನೆಹರೂ-ವಾಜಪೇಯಿ ಸಂಬಂಧ ನೆನೆದ ಶಾಸಕ ಎಂಪಿ ಕುಮಾರಸ್ವಾಮಿ

ನೆಹರೂ ಬಗ್ಗೆ ಅವಹೇಳನಕಾರಿಯಾಗಿ ಸಿಟಿ ರವಿ ಮಾತನಾಡಿರುವುದಕ್ಕೆ ಬಿಜೆಪಿಯ ನಾಯಕರೇ ಬೇಸರಗೊಂಡಿದ್ದಾರೆ ಎಂಬುದು ರಹಸ್ಯವಾಗಿ ಉಳಿದಿಲ್ಲ.
ಬೆಂಗಳೂರು: ನೆಹರೂ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವಹೇಳನಕಾರಿಯಾಗಿ ಮಾತನಾಡಿರುವ ಬಗ್ಗೆ ಅವರ ಪಕ್ಷದವರಲ್ಲೇ ಅಸಮಾಧಾನವಿರುವುದು ಬಹಿರಂಗವಾಗುತ್ತಲೇ ಇದೆ.
ದೇಶ ಕಟ್ಟಿದ ಯಾವುದೇ ನಾಯಕರ ವಿರುದ್ಧ ಮಾತನಾಡಕೂಡದು. ದೇಶದ ನಾಯಕರುಗಳ ವಿಚಾರ ಬಂದಾಗ ಪಕ್ಷ, ಜಾತಿ, ಧರ್ಮದ ಭೇದವಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದ ಬೆನ್ನಲ್ಲೇ ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ನೆಹರೂ ಬಗೆಗೆ ವಾಜಪೇಯಿಯಂಥ ನಾಯಕರು ಎಂಥ ಗೌರವ ಇಟ್ಟುಕೊಂಡಿದ್ದರು ಎಂಬುದರ ಬಗ್ಗೆ ಹೇಳಿದ್ದಾರೆ.

24×7 LIVE INDIA ಸಹ ಸಂಪಾದಕ ಅರವಿಂದ ಶೆಟ್ಟಿ ಅವರೊಡನೆ ಮಾತನಾಡಿದ ಕುಮಾರಸ್ವಾಮಿ, ನೆಹರೂ ಮತ್ತು ವಾಜಪೇಯಿ ಹೇಗೆ ಪರಸ್ಪರರನ್ನು ಗೌರವಿಸುತ್ತಿದ್ದರು ಎಂಬುದನ್ನು ವಿವಿಧ ಸಂದರ್ಭಗಳನ್ನು ಉಲ್ಲೇಖಿಸಿ ವಿವರಿಸಿದ್ದಾರೆ.
ಸಂಸತ್ತಿನಲ್ಲಿ ವಾಜಪೇಯಿ ಮಾತನಾಡುತ್ತಿದ್ದರೆ, ಅವರು ಇನ್ನೂ ಮಾತನಾಡುವುದಕ್ಕೆ ಅವಕಾಶ ಕೊಡುವಂತೆ ಆಗ ಪ್ರಧಾನಿಯಾಗಿದ್ದ ನೆಹರೂ ಸ್ಪೀಕರ್ ಅವರಲ್ಲಿ ವಿನಂತಿಸುತ್ತಿದ್ದರು. ಹಾಗೆಯೇ, ನೆಹರೂ ಅವರ ಬಗ್ಗೆಯೂ ವಾಜಪೇಯಿ ಅಂಥದೇ ಗೌರವ ತಳೆದಿದ್ದರು. ವಾಜಪೇಯಿ ಅರ್ಥಸಚಿವರಾಗಿದ್ದ ಸಂದರ್ಭದಲ್ಲಿ ತಮ್ಮ ಕಚೇರಿಯಲ್ಲಿನ ನೆಹರೂ ಬಾವಚಿತ್ರವನ್ನು ಸಿಬ್ಬಂದಿ ತೆಗೆದರೆಂಬುದು ಗಮನಕ್ಕೆ ಬಂದಾಗ, ನೆಹರೂ ಭಾವಚಿತ್ರವನ್ನು ಪುನಃ ಇಡುಲು ಆದೇಶಿಸಿದ್ದರು ವಾಜಪೇಯಿ ಎಂದು ಕುಮಾರಸ್ವಾಮಿ ಉಲ್ಲೇಖಿಸಿದ್ದಾರೆ.
ಇತ್ತೀಚೆಗೆ ಅಸಂಸದೀಯ ಪದಗಳ ಬಳಕೆ ಹೆಚ್ಚುತ್ತಿದೆಯೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬರೀ ಕುಸ್ತಿಯಷ್ಟೇ ನಡೆಯುತ್ತಿದೆ. ವೈಯಕ್ತಿಕ ದ್ವೇಷ ರಾಜಕಾರಣವನ್ನು ಆವರಿಸಿಕೊಂಡಿದೆ ಎಂದರು.
