ಜುಲೈ 19 ರಿಂದ ಮುಂಗಾರು ಸಂಸತ್ ಅಧಿವೇಶನ ಆರಂಭ: ಕೇಂದ್ರ ಸಚಿವ ಸಚಿವ ಪ್ರಹ್ಲಾದ್ ಜೋಶಿ

ಮೈಸೂರು : ಜುಲೈ 19 ರಿಂದ ಮುಂಗಾರು ಸಂಸತ್ ಅಧಿವೇಶನ 26 ದಿನಗಳ ಕಾಲ ನಡೆಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಗಣಿ ಮತ್ತು ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಸುತ್ತೂರು ಮಠಕ್ಕೆ ಆಗಮಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶ್ರೀಗಳ ಆರ್ಶೀವಾದ ಪಡೆದು ಮಾಧ್ಯಮಗಳ ಜೊತೆ ಮಾತನಾಡಿದರು. ಇದೇ ತಿಂಗಳ 19 ರಿಂದ 26 ದಿನಗಳ ಕಾಲ ಸಂಸತ್‌ನ ಮಳೆಗಾಲದ ಅಧಿವೇಶನ ನಡೆಯಲಿದೆ. ಈ ಅಧಿವೇಶನದಲ್ಲಿ ಹಲವಾರು ಪ್ರಮುಖ ವಿಚಾರಗಳು ಚರ್ಚೆಯಾಗಲಿವೆ. ಹಾಗೆಯೇ, ಹಲವಾರು ಬಿಲ್ಗಳು ಮಂಡನೆಯಾಗಲಿವೆ. ಅಧಿವೇಶನಕ್ಕೂ ಮುನ್ನ ವಿರೋಧ ಪಕ್ಷಗಳ ಸಭೆ ಕರೆಯಲಾಗುವುದು ಎಂದ ಅವರು, ಸರ್ಕಾರ ಸಂಸತ್‌ನಲ್ಲಿ ಯಾವುದೇ ಚರ್ಚೆಗೂ ಸಿದ್ಧವಿದೆ ಎಂದರು.
ಮಸೂದೆಗಳ ಬಗ್ಗೆ ರೈತರು ಅಥವಾ ನಾಯಕರುಗಳು ಸಲಹೆ ನೀಡಿದರೆ ಆ ರೀತಿ ಕೃಷಿ ಮಸೂದೆಗಳನ್ನು ಬದಲಾವಣೆ ಮಾಡಲಾಗುವುದು. ಆದರೆ, ಈ ಕೃಷಿ ಮಸೂದೆಗಳನ್ನು ವಾಪಸ್ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರು.
ದೇಶದಲ್ಲಿ ಲಸಿಕೆಯ ಕೊರತೆ ಇದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ದುರಹಂಕಾರ ಮತ್ತು ಮಾಹಿತಿ ಕೊರತೆಗೆ ಲಸಿಕೆ ಇಲ್ಲ. ರಾಹುಲ್ ಗಾಂಧಿ ಅವರಿಗೆ ಮಾಹಿತಿ ಕೊರತೆಯಿದೆ ಎಂದರು.
