ಎಂಕೆ ಸ್ಟಾಲಿನ್ ನನ್ನ ತಮ್ಮನಿದ್ದಂತೆ, ರಾಜಕೀಯ ಚರ್ಚೆ ನಡೆಸಿಲ್ಲ

ಚೆನ್ನೈ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚೆನ್ನೈನಲ್ಲಿರುವ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ನಿವಾಸಕ್ಕೆ ಭೇಟಿ ನೀಡಿದ್ದು ತೀವ್ರ ಕುತೂಹಲ ಕೆರಳಿಸಿತ್ತು.
2024ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಕುರಿತು ಈ ವೇಳೆ ಮಾತುಕತೆ ನಡೆಸಲಾಗಿದೆ ಎಂಬ ಊಹಾಪೋಹಗಳಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೆರೆ ಎಳೆದಿದ್ದು, ನಾವು ಯಾವುದೇ ರೀತಿಯ ರಾಜಕೀಯ ವಿಚಾರಗಳನ್ನು ಚರ್ಚೆ ಮಾಡಿಲ್ಲ. ಸ್ಟಾಲಿನ್ ನನ್ನ ತಮ್ಮನಿದ್ದಂತೆ. ಹೀಗಾಗಿ, ಆತನ ಮನೆಗೆ ತೆರಳಿ, ಕಾಫಿ ಕುಡಿದು ಬಂದಿದ್ದೇನೆ ಎಂದಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರನ್ನು ಬುಧವಾರ ಚೆನ್ನೈನಲ್ಲಿ ಭೇಟಿಯಾದ ಮಮತಾ ಬ್ಯಾನರ್ಜಿ, ಇದೊಂದು ಸೌಜನ್ಯದ ಭೇಟಿ. ಸ್ಟಾಲಿನ್ ನನ್ನ ಸಹೋದರನಿದ್ದಂತೆ. ಇಬ್ಬರು ರಾಜಕೀಯ ನಾಯಕರು ಒಟ್ಟಿಗೆ ಇರುವಾಗ ನಾವು ಏನನ್ನಾದರೂ ಮಾತನಾಡಬಹುದು. ರಾಜಕೀಯಕ್ಕಿಂತ ಅಭಿವೃದ್ಧಿ ದೊಡ್ಡದು ಎಂದು ನಾನು ಭಾವಿಸುತ್ತೇನೆ. ಹೀಗಾಗಿ ನಾವು ರಾಜ್ಯದ ಅಭಿವೃದ್ಧಿ ಬಗ್ಗೆಯೂ ಚರ್ಚಿಸಬಹುದು. ಕೇವಲ ರಾಜಕೀಯ ಚರ್ಚೆ ನಡೆಯುತ್ತದೆ ಎಂದು ನೀವು ಭಾವಿಸಿದರೆ ಅದು ತಪ್ಪು ಎಂದಿದ್ದಾರೆ.
ಈ ವೇಳೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ಗೆ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡುವಂತೆ ಮಮತಾ ಬ್ಯಾನರ್ಜಿ ಆಹ್ವಾನ ನೀಡಿದ್ದಾರೆ. ಪಶ್ಚಿಮ ಬಂಗಾಳದ ಗವರ್ನರ್ ಲಾ ಗಣೇಶನ್ ಅವರ ಸಹೋದರನ ಹುಟ್ಟುಹಬ್ಬದ ಆಚರಣೆಯಲ್ಲಿ ಪಾಲ್ಗೊಳ್ಳಲು ಮಮತಾ ಬ್ಯಾನರ್ಜಿ ಚೆನ್ನೈಗೆ ಬಂದಿದ್ದರು. ಆಗ ಎಂಕೆ ಸ್ಟಾಲಿನ್ ತಮ್ಮ ನಿವಾಸಕ್ಕೆ ಆಗಮಿಸಬೇಕೆಂದು ಮಮತಾ ಬ್ಯಾನರ್ಜಿಯನ್ನು ಆಹ್ವಾನಿಸಿದ್ದರು. ಹೀಗಾಗಿ, 20 ನಿಮಿಷಗಳ ಕಾಲ ಮಮತಾ ಹಾಗೂ ಸ್ಟಾಲಿನ್ ಕುಟುಂಬಸ್ಥರು ಒಟ್ಟಿಗೇ ಸಮಯ ಕಳೆದಿದ್ದಾರೆ.
