ಈಶ್ವರಪ್ಪ ರಾಜಿನಾಮೆ ನೀಡಲೇಬೇಕು, ಉಭಯ ಸದನಗಳಲ್ಲಿ ಕಾಂಗ್ರೆಸ್ ಅಹೊರಾತ್ರಿ ಧರಣಿ: ಸಿಎಂ ಮನವೊಲಿಕೆ ಯತ್ನ ವಿಫಲ

ಬೆಂಗಳೂರು: ಭವಿಷ್ಯದಲ್ಲಿ ದೆಹಲಿಯ ಕೆಂಪುಕೋಟೆ ಮೇಲೆ ರಾಷ್ಟ್ರಧ್ವಜದ ಬದಲು ಕೇಸರಿ ಧ‍್ವಜ ಹಾರಿಸುತ್ತೇವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ, ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿಬೇಕೆಂದದು ಆಗ್ರಹಿ ಕಾಂಗ್ರೆಸ್ ವಿಧಾನಮಂಡಲದ ಉಭಯ ಸದನಗಳಲ್ಲಿ ಅಹೋರಾತ್ರಿ ಧರಣಿ ಆರಂಭಿಸಿದೆ.
ಪ್ರಕರಣ ತಾರ್ಕಿಕ ಅಂತ್ಯ ಕಾಣುವವರೆಗೂ ಸದನದದ ಒಳಗೆ ಮತ್ತು ಹೊರಗೆ ಸಚಿವ ಈಶ್ವರಪ್ಪ ವಿರುದ್ಧದ ಹೋರಾಟ ಮುಂದುವರಿಯಲಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಸಿಎಂ ಮನವೊಲಿಕೆ ಯತ್ನ ವಿಫಲ
ಈ ನಡುವೆ ಗುರುವಾರ ರಾತ್ರಿ ವಿಧಾನಸಭೆಯಲ್ಲಿ ಧರಣಿನಿರತ ಕಾಂಗ್ರೆಸ್ ಸದಸ್ಯರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಅಶೋಕ್ ಭೇಟಿ ಮಾಡಿ ಧರಣಿ ಕೈ ಬಿಡುವಂತೆ ಮನವಿ ಮಾಡಿದರು. ಆದರೆ ಪ್ರಯೋಜನವಾಗದೇ ಕಾಂಗ್ರೆಸ್ ತನ್ನ ಪ್ರತಿಭಟನೆಯನ್ನೂ ಮುಂದುವರಿಸಿದೆ.
ಇದಕ್ಕೂ ಮುನ್ನ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಧಾನಸಭೆಯ ಮೊಗಸಾಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಶಾಸಕರನ್ನು ಸೌಹಾರ್ದಯುತವಾಗಿ ಭೇಟಿಮಾಡಿ ಸಮಾಲೋಚನೆ ನಡೆಸಿದರು. ಸದನದ ಕಾರ್ಯಕಲಾಪಗಳನ್ನು ಸುಗಮವಾಗಿ ನಡೆಸಲು ಅಗತ್ಯ ಸಹಕಾರ ನೀಡುವಂತೆ ಹಾಗೂ ಧರಣಿ ಕೈಬಿಟ್ಟು ಅಗತ್ಯ ಸಹಕಾರ ನೀಡುವಂತೆ ಮನವಿ ಮಾಡಿದರು.
ಇದೇ ವೇಳೆ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಜಿ ಸಚಿವ ರಾಮಲಿಂಗರೆಡ್ಡಿ ಅವರು ವಿಧಾನ ಪರಿಷತ್ತಿಗೆ ಭೇಟಿ ನೀಡಿ ವಿಪಕ್ಷ ನಾಯಕ ಹರಿಪ್ರಸಾದ್ ಹಾಗೂ ಧರಣಿ ನಿರತ ಸದಸ್ಯರ ಜೊತೆ ಮಾತುಕತೆ ನಡೆಸಿದರು.
ಇದಕ್ಕೂ ಮುನ್ನ ವಿಧಾನಸಭೆಯಲ್ಲಿ ಬುಧವಾರದಿಂದಲೇ ಸಚಿವ ಈಶ್ವರಪ್ಪ ಅವರ ವಿವಾದಾತ್ಮಕ ಹೇಳಿಕೆ ವಿರುದ್ಧ ಪ್ರತಿಭಟನೆ ಆರಂಭಿಸಿದ್ದ ಕಾಂಗ್ರೆಸ್ ಗುರುವಾರವೂ ಸದನದಲ್ಲಿ ಹೋರಾಟ ಮುಂದುವರಿಸಿತು. ಪರಿಣಾಮವಾಗಿ ಪ್ರಶ್ನೋತ್ತರ ಕಲಾಪದ ನಂತರ ಧರಣಿ ನಿರತ ಸದಸ್ಯರ ಗದ್ದಲದ ನಡುವೆ ಸ್ಪಿಕರ್ ಕಾಗೇರಿ ಸದನವನ್ನು ಮಧ‍್ಯಾಹ್ನ 3 ಗಂಟೆಗೆ ಮುಂದೂಡಿದರು.
ಸಂಜೆ ಮತ್ತೆ ಸದನ ಸಮಾವೇಶಗೊಂಡಾಗ ಗದ್ದಲದ ವಾತಾವರಣ ಮುಂದುವರಿದ ಹಿನ್ನೆಲೆಯಲ್ಲಿ ಸದನವನ್ನು ಶುಕ್ರವಾರ 11 ಗಂಟೆಗೆ ಸಭಾಧ್ಯಕ್ಷ ಕಾಗೇರಿ ಅವರು ಮುಂದೂಡಿದರು. ಪ್ರತಿಭಟನಾನಿರತ ಕಾಂಗ್ರೆಸ್ ಸದಸ್ಯರು ಸದನದಲ್ಲೇ ಉಳಿದು ಘೋಷಿಸಿದಂತೆ ಅಹೋರಾತ್ರಿ ಧರಣಿ ಆರಂಭಿಸಿದರು. ಧರಣಿನಿರತರನ್ನು ಮನವೊಲಿಸುವ ಸರ್ಕಾರದ ಪ್ರಯತ್ನ ವಿಫಲವಾಯಿತು. ಇದೇ ಚಿತ್ರಣ ವಿಧಾನಪರಿಷತ್ ನಲ್ಲೂ ಕಂಡು ಬಂತು. ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಮತ್ತು ಧರಣಿ ನಿರತ ಕಾಂಗ್ರೆಸ್ ಸದಸ್ಯರನ್ನು ಮನವೊಲಿಸುವ ಸರ್ಕಾರದ ಯತ್ನ ಮೇಲ್ಮನೆಯಲ್ಲೂ ಪ್ರಯೋಜವಾಗಲಿಲ್ಲ.
