ಹಿಜಾಬ್ ಕಿಚ್ಚು : ಸಿದ್ದರಾಮಯ್ಯಗೆ ಸಚಿವ ಶ್ರೀರಾಮಲು ತಿರುಗೇಟು

ಕಲಬುರಗಿ : ಹಿಜಾಬ್ ಬಗ್ಗೆ ದ್ವೇಷ ಭಾವನೆ ಬಿತ್ತಿದ್ದೆ ಬಿಜೆಪಿ ಎಂಬ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಸಾರಿಗೆ ಸಚಿವ ಬಿ. ಶ್ರೀರಾಮುಲು ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ಇಟ್ಟುಕೊಂಡು ಸಿದ್ದರಾಮಯ್ಯ ಅವರು ರಾಜಕೀಯ ಸ್ಕೋರ್ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಕ್ರಿಕೆಟ್ ಕ್ರೀಡೆಗಳಲ್ಲಿ ಆಟಗಾರರು ಸ್ಕೋರ್ ಮಾಡುವ ರೀತಿ ಸಿದ್ದರಾಮಯ್ಯ ಪೊಲಿಟಿಕಲ್ ಸ್ಕೋರ್ ಮಾಡಲು ಯತ್ನಿಸುತ್ತಿದ್ದಾರೆ ಎಂದು ಗುಡುಗಿದರು.
ಸಿದ್ದರಾಮಯ್ಯ ಅವರು ಇಳಿದಿರುವ ಮಟ್ಟಕ್ಕೆ ನಾನು ಇಳಿಯುವ ಪ್ರಯತ್ನ ಮಾಡಲ್ಲ. ಹಿಜಾಬ್ ವಿಚಾರ ಕೋರ್ಟ್ನಲ್ಲಿ, ಹಾಗಾಗಿ ಈ ಹಂತದಲ್ಲಿ ನಾನು ಹೆಚ್ಚೇನು ಮಾತನಾಡಲಾರೆ ಎಂದರು.
ಸಚಿವ ಸಂಪುಟದ ಉಪ ಸಮಿತಿ ಸಭೆ :
ರಾಜ್ಯ ಸಾರಿಗೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರ ಅಧ್ಯಕ್ಷತೆಯಲ್ಲಿ ಕಲಬುರಗಿಯ ಕೆ.ಕೆ.ಆರ್.ಡಿ.ಬಿ. ಸಭಾಂಗಣದಲ್ಲಿ ಸಭೆ ನಡೆಸಿದರು. 371(ಜೆ) ಅಡಿಯಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ನೀಡಿರುವ ವಿಶೇಷ ಸ್ಥಾನಮಾನದಡಿಯಲ್ಲಿ ಹೊರಡಿಸಲಾದ ಆದೇಶಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ಹಾಗೂ ಪರಾಮರ್ಶಿಸಲು ರಚಿಸಲಾಗಿರುವ ಸಚಿವ ಸಂಪುಟದ ಉಪ ಸಮಿತಿ ಸಭೆ ನಡೆಯಿತು.
