Breaking Newsಮೆಟ್ರೋರಾಜಕೀಯರಾಜ್ಯಸುದ್ದಿ

ನಾಳೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಮೇಕೆದಾಟು ಪಾದಯಾತ್ರೆ ಆರಂಭ: ಡಿ ಕೆ ಶಿವಕುಮಾರ್

ಬೆಂಗಳೂರು: ನಾಳೆ ಬೆಳಿಗ್ಗೆ 9 ಗಂಟೆಗೆ ತಾಯಿ ಚಾಮುಂಡೇಶ್ವರಿಗೆ ಪೂಜೆ ನಂತರ ಪಾದಯಾತ್ರೆ ಆರಂಭವಾಗಲಿದ್ದು, ಮಾರ್ಚ್ 3 ರಂದು ಮಧ್ಯಾಹ್ನ ಪಾದಯಾತ್ರೆ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನ ತಲುಪಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಇಂದು ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾಮಾರಂಭದ ಪೂರ್ವ ಸಿದ್ಧತೆ ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ಬೆಂಗಳೂರು ನಾಗರೀಕರಿಗೆ ಕುಡಿಯುವ ನೀರು ಪೂರೈಸಲು, ಕಾವೇರಿ ಪ್ರದೇಶದ ರೈತರನ್ನು ಬದುಕಿಸಲು ನೀರಿಗಾಗಿ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಮೇಕೆದಾಟುವಿನಿಂದ ರಾಮನಗರದವರೆಗೆ ಪಾದಯಾತ್ರೆ ಮಾಡಿದ್ದೆವು. ಈ ಮಧ್ಯೆ ಕೋವಿಡ್ ಮೂರನೇ ಅಲೆ ಸಂದರ್ಭದಲ್ಲಿ ಜನರ ಆರೋಗ್ಯ, ಕೋರ್ಟ್ ಆದೇಶಕ್ಕೆ ಗೌರವ ಸೂಚಿಸಲು ಈ ಪಾದಯಾತ್ರೆಯನ್ನು ನಿಲ್ಲಿಸಿದ್ದೆವು. ಎಲ್ಲಿ ನಿಲ್ಲಿಸಿದ್ದೇವೋ ಈಗ ಅಲ್ಲಿಂದ ಮತ್ತೆ ಆರಂಭಿಸುತ್ತಿದ್ದೇವೆ ಎಂದರು.

ಪಕ್ಷಾತೀತ ಹೋರಾಟ :

ಇದು ಪಕ್ಷಾತೀತ ಹೋರಾಟ. ಈ ಹೋರಾಟದ ಮುಂದಾಳತ್ವವನ್ನು ಕಾಂಗ್ರೆಸ್ ಪಕ್ಷ ವಹಿಸಿಕೊಂಡಿದೆ. ಎಲ್ಲ ಅಪಾರ್ಟ್​​ಮೆಂಟ್ ಸಂಘಗಳು, ಕಾರ್ಮಿಕ, ಕೈಗಾರಿಕಾ ಸಂಘಟನೆ, ಚಿತ್ರರಂಗದ ಎಲ್ಲ ವಿಭಾಗದವರು, ಧರ್ಮಗುರುಗಳು, ಜನಸಾಮಾನ್ಯರು ಈ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಹೇಳಿದರು.

ನಾವು ಐದು ದಿನಗಳ ಕಾಲ ಬೆಂಗಳೂರು ನಗರದಲ್ಲಿ ಪಾದಯಾತ್ರೆ ಮಾಡಬೇಕಾಗಿತ್ತು, ಬಜೆಟ್ ಅಧಿವೇಶನ ಇರುವ ಕಾರಣ ಕೇವಲ 3 ದಿನ ಪಾದಯಾತ್ರೆ ಮಾಡುತ್ತೇವೆ ಎಂದು ತಿಳಿಸಿದರು.

ಪಾದಯಾತ್ರೆಗೆ ಬರುವವರು ಸಾಧ್ಯವಾದಷ್ಟು ಮೆಟ್ರೋ ಬಳಸಿ ಎಂದು ಮನವಿ ಮಾಡುತ್ತೇನೆ. ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದಂತೆ ಈಗ ನಿಮ್ಮ ಕುಡಿಯುವ ನೀರಿನ ಹಕ್ಕಿಗಾಗಿ ಹೋರಾಟ ಮಾಡಿ. ಪಾದಯಾತ್ರೆಯಲ್ಲಿ ಭಾಗವಹಿಸುವವರು ತಮ್ಮ ಹೆಸರು ನೋಂದಣಿ ಮಾಡಿಸಿಕೊಳ್ಳಿ. ಆಗ ನಿಮಗೆ ಪ್ರಮಾಣ ಪತ್ರ ನೀಡಲಾಗುವುದು. ರೈತ ಸಂಘಟನೆ, ಕನ್ನಡಪರ ಸಂಘಟನೆಗಳು ಎಲ್ಲರೂ ಸಹಕಾರ ನೀಡಲಿದ್ದಾರೆ ಎಂದು ಹೇಳಿದರು.

ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಿ

ಧರ್ಮಸ್ಥಳದಲ್ಲಿ ದಲಿತ ಸಮುದಾಯದ ಕಾರ್ಮಿಕನನ್ನು ಭಜರಂಗ ದಳದ ಕಾರ್ಯಕರ್ತರು ಹತ್ಯೆ ಮಾಡಿದ್ದು, ಕಾಂಗ್ರೆಸ್ ಪಕ್ಷ ಈ ವಿಚಾರದಲ್ಲಿ ಯಾವ ನಿಲುವು ತಾಳಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಹತ್ಯೆಯನ್ನು ಭಜರಂಗ ದಳದವರಾದರೂ ಮಾಡಲಿ ಕಾಂಗ್ರೆಸ್ ನವರಾದರೂ ಮಾಡಲಿ ಗೃಹ ಸಚಿವರು, ಪೊಲೀಸರು ಕೂಡಲೇ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಶಿವಮೊಗ್ಗ ಪ್ರಕರಣ ಹಾಗೂ ಈ ಪ್ರಕರಣದಲ್ಲಿ ಹತ್ಯೆಗೊಂಡವರಿಗೆ ನ್ಯಾಯ ಒದಗಿಸಿಕೊಡಬೇಕು. ಇದು ಪೊಲೀಸರ ಕರ್ತವ್ಯ. ಅವರು ಅದನ್ನು ಮಾಡಲಿ’ ಎಂದು ಆಗ್ರಹಿಸಿದರು.

ವಾಪಸ್ ಕರೆತರಲು ಅಗತ್ಯ ಕ್ರಮ ಕೈಗೊಳ್ಳಬೇಕು :

ಉಕ್ರೇನ್ ನಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿಗಳ ರಕ್ಷಣೆಗೆ ಸರ್ಕಾರಕ್ಕೆ ಯಾವ ಸಲಹೆ ನೀಡುತ್ತೀರಿ ಎಂಬ ಪ್ರಶ್ನೆಗೆ, ‘ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಅಲ್ಲಿ ಸಿಲುಕಿರುವ ಕನ್ನಡಿಗರನ್ನು ವಾಪಸ್ ಕರೆತರಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

Spread the love

Related Articles

Leave a Reply

Your email address will not be published. Required fields are marked *

Back to top button