ಗಾಂಧೀಜಿ ನಮಗೆ ಸದಾ ಆದರ್ಶಪ್ರಾಯ ಮತ್ತು ಮಾರ್ಗದರ್ಶಕ: ಸಿಎಂ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಹಾತ್ಮಾ ಗಾಂಧಿ ಹುತಾತ್ಮ ದಿನದ ಅಂಗವಾಗಿ ಭಾನುವಾರ ಬೆಂಗಳೂರಿನ ವಿಧಾನಸೌಧ ಆವರಣದಲ್ಲಿ ಇರುವ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.
ನಂತರ ಮಾತನಾಡಿದ ಸಿಎಂ ಬೊಮ್ಮಾಯಿ, ಮಹಾತ್ಮಗಾಂಧಿಜಿ ಅವರ ಬಲಿದಾನಕೊಟ್ಟಿರುವ ದಿನವನ್ನು ಹುತಾತ್ಮರ ದಿನವಾಗಿ ಆಚರಿಸುತ್ತಿದ್ದೇವೆ. ಮಹಾತ್ಮ ಗಾಂಧಿ ಇಡಿ ವಿಶ್ವದ ನಾಯಕರು ಸತ್ಯ ಮತ್ತು ಅಹಿಂಸೆ ಪ್ರತಿಪಾದಕರು, ಸತ್ಯ, ಅಹಿಂಸೆ ಶಾಂತಿಯಿಂದಲೇ ಸ್ವಾತಂತ್ರ್ಯ ಪಡೆಯುವ ಛಲ ತೊಟ್ಟವರು. ಹಲವಾರು ಕಷ್ಟ-ಕಾರ್ಪಣ್ಯ ಹಲವು ಬಾರಿ ಜೈಲು, ಲಾಠಿ ಏಟು ಅನುಭವಿಸಿದರೂ ಎಂದಿಗೂ ಕೂಡ ತಮ್ಮ ಸತ್ಯ ಅಹಿಂಸೆಯ ಸಿದ್ದಾಂತವನ್ನು ಬಿಟ್ಟುಕೊಡಲಿಲ್ಲ ಎಂದರು.
ನನ್ನ ಜೀವನವೇ ಒಂದು ಸಂದೇಶ ಎಂದು ಗಾಂಧೀಜಿ ಹೇಳಿದರು. ತಮ್ಮ ಆತ್ಮ ಚರಿತ್ರೆಯಲ್ಲಿ ಎಕ್ಸ್ ಪೆರಿಮೆಂಟ್ ಆಫ್ ಟ್ರೂತ್ ಅನ್ನೋ ಮಾತನ್ನು ಹೇಳಿದ್ದಾರೆ. ಅದನ್ನು ಹೇಳಲು ನೈತಿಕ ಶಕ್ತಿ ಇದ್ದರೆ ಮಾತ್ರ ಸಾಧ್ಯ. ಅವರ ಜೀವನ ಅತ್ಯಂತ ಪರಿಶುದ್ದ ಮತ್ತು ಸತ್ಯದಿಂದ ಕೂಡಿರುವಂತಹದ್ದು ಎಂದೂ ಅವರು ಹೇಳಿದರು.
ನಮಗೆ ಅತ್ಯಂತ ಆದರ್ಶಪ್ರಿಯವಾಗಿರುವಂತಹ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ. ಅವರು ಸದಾ ಕಾಲ ಅವರು ಬದುಕು ಮತ್ತು ವಿಚಾರ ನಮಗೆ ದಾರಿ ದೀಪ ಮತ್ತು ಮಾರ್ಗದರ್ಶಕ.ಅವರ ಆದರ್ಶಗಳು ಸ್ವತಂತ್ರ ಭಾರತದ ಆಧಾರಸ್ಥಂಭ. ಅವರೊಂದಿಗೆ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಲಾಲಾ ಲಜ್ ಪತ್ ರಾಯ್, ಚಂದ್ರಶೇಖರ್ ಆಜಾದ್ ಸೇರಿದಂತೆ ಸಾವಿರಾರು ಜನ ಹುತಾತ್ಮರಾಗಿದ್ದಾರೆ. ಇವರೆಲ್ಲರೂ ಸ್ವಾತಂತ್ರ್ಯ ಪೂರ್ವದಲ್ಲೇ ಆದರ್ಶಪ್ರಾಯರಾಗಿದ್ದಾರೆ ಅವರೊಂದಿಗೆ ಸ್ವತಂತ್ರ ಭಾರತಕ್ಕಾಗಿ ಪ್ರಾಣತ್ಯಾಗ ಮಾಡಿದ ಎಲ್ಲರಿಗೂ ಗೌರವಾರ್ಪಣೆಗಳು ಎಂದರು.
ಈ ಸಂದರ್ಭದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಕಂದಾಯ ಸಚಿವ ಆರ್ ಅಶೋಕ, ಶಾಸಕರಾದ ರಾಜಕುಮಾರ ಪಾಟೀಲ್ ತೇಲ್ಕೂರ್, ಎನ್ ರವಿಕುಮಾರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಎಸಿಎಸ್ ರಾಕೇಶ್ ಸಿಂಗ್ ಮತ್ತು ಇತರರು ಇದ್ದರು.
