Breaking NewsLatestಕ್ರೈಂಮೆಟ್ರೋರಾಜಕೀಯರಾಷ್ಟ್ರೀಯಸುದ್ದಿ

ಅಕ್ರಮ ಹಣ ವರ್ಗಾವಣೆ ಪ್ರಕರಣ: ಇಡಿಯಿಂದ ಮಹಾರಾಷ್ಟ್ರ ಸಚಿವ ನವಾಬ್ ಮಲ್ಲಿಕ್ ಬಂಧನ

ಮುಂಬಯಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಆತನ ಸಹಚರರ ಚಟುವಟಿಕೆಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸಚಿವ ನವಾಬ್ ಮಲ್ಲಿಕ್ ಅವರನ್ನು ಜಾರಿ ನಿರ್ದೇಶನಾಯಲಯ (ಇಡಿ) ವಿಚಾರಣೆ ಬಳಿಕ ಬುಧವಾರ ಬಂಧಿಸಿದೆ.

ಪಾತಕಿ ದಾವೂದ್ ಸಹಚರರೊಂದಿಗೆ ಆರೋಪಿತ ವಹಿವಾಟುಗಳು ಮತ್ತು ಅವರೊಂದಿಗಿನ ಭೂ ವ್ಯವಹಾರಗಳ ಬಗ್ಗೆ ಮಲ್ಲಿಕ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ವಿಚಾರಣೆಯಿಂದ ಅವರು ತಪ್ಪಿಸಿಕೊಳ್ಳುತ್ತಿದ್ದರು ಮತ್ತು ತನಿಖೆಗೆ ಸಹಕಾರ ನೀಡುತ್ತಿರಲಿಲ್ಲ ಎಂದು ಇಡಿ ಹೇಳಿದೆ.

ಈಚೆಗಷ್ಟೆ ಇಡಿ ಹಲವು ದಾಳಿಗಳನ್ನು ನಡೆಸಿದ್ದು, ಇದೇ ಪ್ರಕರಣದಲ್ಲಿ ದಾವೂದ್ ಇಬ್ರಾಹಿಂ ಸೋದರ ಇಕ್ಬಾಲ್ ಕಸ್ಕರ್ ನನ್ನು ವಶಕ್ಕೆ ಪಡೆದಿತ್ತು. ಮೂಲಗಳ ಪ್ರಕಾರ ಎನ್ ಸಿಪಿ ನೇತಾರರೂ ಆಗಿರುವ ನವಾಬ್ ಮಲ್ಲಿಕ್ ಖರೀದಿಸಿದ ಆಸ್ತಿಗೆ ಸಂಬಂಧಿಸಿದ ಕೆಲವು ಪುರಾವೆಗಳು ತನಿಖೆ ಸಂದರ್ಭದಲ್ಲಿ ಲಭ್ಯವಾಗಿದ್ದವು ಎನ್ನಲಾಗಿದೆ.

ಮಹಾರಾಷ್ಟ್ರದ ಮಹಾ ವಿಕಾಸ್ ಅಗಾಢಿ ಸರ್ಕಾರ ಮತ್ತು ಕೇಂದ್ರದ ನಡುವಿನ ವಾಕ್ಸಮರದ ನಡುವೆ 62 ವರ್ಷದ ಸಚಿವ ನವಾಬ್ ಮಲ್ಲಿಕ್ ರನ್ನು ಬುಧವಾರ ಬೆಳಗ್ಗೆ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ ಕಚೇರಿಗೆ ಕರೆದೊಯ್ಯಲಾಗಿತ್ತು.

ಕೇಂದ್ರ ತನಿಖಾ ಸಂಸ್ಥೆ ಅಧಿಕಾರಿಗಳು ಬೆಳಗ್ಗೆ 6 ಗಂಟೆಗೆ ಮಲ್ಲಿಕ್ ಮನೆಗೆ ತಲುಪಿ, ಅಲ್ಲೇ ಅವರನ್ನು ಕೆಲ ಕಾಲ ವಿಚಾರಣೆಗೊಳಪಡಿಸಿದ್ದರು. ನಂತರ ಇಡಿ ಕಚೇರಿಗೆ ಕರೆತಂದು ಮತ್ತೆ 5 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಲಾಯಿತು.

ವಿಚಾರಣೆ ವೇಳೆ, ದಕ್ಷಿಣ ಮುಂಬಯಿ ಇಡಿ ಕಚೇರಿಯ ಸಮೀಪದಲ್ಲಿರುವ ಎನ್ ಸಿಪಿ ಪ್ರಧಾನ ಕಚೇರಿ ಬಳಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಇಡಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button