ಕೆರೆ ನೀರು ಕಂಡೋರ ಪಾಲು: ಟ್ಯಾಂಕರ್ ಮತ್ತು ಟ್ರಾಕ್ಟರ್ ಜಪ್ತಿ!

ದೇವನಹಳ್ಳಿ: ರೈತರು ಸಣ್ಣಪುಟ್ಟ ಕೃಷಿಗೆ ಕೆರೆಯಿಂದ ನೀರು ಬಳಸಿದರೆ ರೈತರ ನೀರೆತ್ತುವ ಯಂತ್ರಗಳನ್ನು ಜಪ್ತಿ ಮಾಡುವ ಅಧಿಕಾರಿಗಳು ರಸ್ತೆ ಗುತ್ತಿಗೆದಾರರು ರಾಜರೋಷವಾಗಿ ಟ್ಯಾಂಕರ್ ಮೂಲಕ ನೀರು ಒಯ್ಯುತ್ತಿದ್ದರು ಗಮನಹರಿಸದಿರುವ ಪ್ರಕರಣ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅನತಿ ದೂರದ ಬೆಟ್ಟಕೋಟೆ ಕೆರೆಯಲ್ಲಿ ಬೆಳಕಿಗೆ ಬಂದಿದೆ.
ರೈತರಿಗೆ ಅನುಕೂಲವಾಗಲಿ ಅಂತರ್ಜಲದ ಮಟ್ಟ ಏರಿಕೆಯಾಗಲಿ ಎಂಬ ದೃಷ್ಟಿಯಿಂದ ಸರ್ಕಾರ ಎಚ್ ಎನ್ ವ್ಯಾಲಿ ನೀರನ್ನು ದೇವನಹಳ್ಳಿ ಕೆರೆಗಳಿಗೆ ಹರಿಸುತ್ತಿದ್ದರೆ, ಕಾರ್ಗೋ ರಸ್ತೆ ಕಾಮಗಾರಿಗೆ ಪ್ರತಿನಿತ್ಯ ಸುಮಾರು 20ಕ್ಕೂ ಹೆಚ್ಚು ಲೋಡ್ ನೀರನ್ನು ಕೆರೆಯಿಂದ ಟ್ಯಾಂಕರ್ ಮೂಲಕ ಅಕ್ರಮವಾಗಿ ಒಯ್ಯುತ್ತಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಟ್ಟಕೋಟೆಯಿಂದ ಸೂಲಿಬೆಲೆ ರಸ್ತೆಗೆ ಸಂಪರ್ಕ ಕಲ್ಪಿಸುವ ಸುಮಾರು 2.5 ಕಿ.ಮಿ, ದೂರದ ರಸ್ತೆ 6 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು ಇದರ ಗುತ್ತಿಗೆದಾರರು ಗ್ರಾಮ ಪಂಚಾಯಿತಿಯಿಂದಾಗಲಿ ಯಾವುದೇ ಇಲಾಖೆಯಿಂದಾಗಲಿ ಅನುಮತಿ ಪಡೆಯದೆ ಅಕ್ರಮವಾಗಿ ಬೆಟ್ಟಕೋಟೆ ಕೆರೆಯಿಂದ ನೀರನ್ನು ಟ್ರಾಕ್ಟರ್ಗೆ ಮೋಟರ್ ಪೈಪ್ ಅಳವಡಿಸಿ ಟ್ಯಾಂಕರ್ ಮೂಲಕ ಕಳೆದ ಎರಡು ತಿಂಗಳಿನಿಂದಲೂ ಪ್ರತಿದಿನ ನೀರನ್ನು ಒಯ್ಯುತ್ತಿರುವುದರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿ ತಿಳಿದು ದೇವನಹಳ್ಳಿ ತಹಶಿಲ್ದಾರ್ ಶಿವರಾಜ್ ಸೂಚನೆಯ ಮೇರೆಗೆ ಸ್ಥಳಕ್ಕೆ ಚನ್ನರಾಯಪಟ್ಟಣ ನಾಡ ಕಚೇರಿಯ ಉಪ ತಹಶಿಲ್ದಾರ್ ಶ್ರೀನಿವಾಸುಲು, ರೆವಿನ್ಯೂ ಇನ್ಸ್ ಪೆಕ್ಟರ್ ಜನಾರ್ದನ, ಗ್ರಾಮ ಲೆಕ್ಕಧಿಕಾರಿ ಗೌತಮ್ ಅವರು ಸ್ಥಳಕ್ಕೆ ಬಂದು ಎರಡು ಟ್ಯಾಂಕರ್ ಗಳು ಮತ್ತು ಒಂದು ಟ್ರಾಕ್ಟರ್ ನ್ನು ಜಪ್ತಿ ಮಾಡಿ ವಶಕ್ಕೆ ಪಡೆದರು.
ತಕ್ಷಣವೇ ಕೆರೆ ನೀರನ್ನು ಒಯ್ಯುವವರ ವಿರುದ್ದ ಕ್ರಮ ಕೈಗೊಳ್ಳಬೇಕು ಕಾಮಗಾರಿಗೆ ಬಿಡುಗಡೆ ಮಾಡುವ ಹಣವನ್ನು ತಡೆ ಹಿಡಿಯಬೇಕು ಗುತ್ತಿಗೆದಾರರಿಂದ ಪರಿಹಾರ ಭರಿಸಬೇಕು ಮತ್ತು ಗುತ್ತಿಗೆದಾರ ಸೇರಿದಂತೆ ಈ ಅಕ್ರಮಕ್ಕೆ ಸ್ಥಳಿಯವಾಗಿ ಏಜೆಂಟ್ ರೀತಿಯಾಗಿ ಸಹಾಯ ಮಾಡುತ್ತಿರುವ ಪರಮೇಶ್ ಸಂಪಂಗಿ ಮತ್ತು ರವಿ ಎಂಬುವವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಆಗ್ರಹಿಸಿದರು.
