ಆ.15: ರೈತ ಸಂಘಟನೆಗಳಿಂದ ‘ಕಿಸಾನ್ ಮಜ್ದೂರ್ ಆಝಾದಿ ಸಂಗ್ರಾಮ್ ದಿವಸ್’

ನವದೆಹಲಿ: ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಲು ದೆಹಲಿಯಲ್ಲಿ ಆಂದೋಲನ ನಡೆಸುತ್ತಿರುವ ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ ಆ. 15 ನ್ನು ‘ಕಿಸಾನ್ ಮಜ್ದೂರ್ ಆಝಾದಿ ಸಂಗ್ರಾಮ್ ದಿವಸ್’ ಎಂದು ಆಚರಿಸಲು ಕರೆ ನೀಡಿದೆ.
ಸಂಯುಕ್ತ ಕಿಸಾನ್ ಮೋರ್ಚಾ ನೀಡಿದ ಕರೆಯ ಹಿನ್ನೆಲೆಯಲ್ಲಿ ದೇಶದಾದ್ಯಂತ ರೈತ ಸಂಘಟನೆಗಳು ಆ. 15ರಂದು ನಡೆಯುವ 75ನೇ ಸ್ವಾತಂತ್ರೋತ್ಸವವನ್ನು “ಕಿಸಾನ್ ಮಜ್ದೂರು ಆಝಾದಿ ಸಂಗ್ರಾಮ್ ದಿವಸ್” ಆಗಿ ಆಚರಿಸಲಿದೆ. ರಾಷ್ಟ್ರಧ್ವಜವನ್ನು ಹಿಡಿದು ಮೆರವಣಿಗೆ ನಡೆಸಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವುದರ ಮೂಲಕ ವಿಶಿಷ್ಟ ರೀತಿಯಲ್ಲಿ ಪ್ರತಿರೋಧ ಪ್ರದರ್ಶನ ನಡೆಯಲಿದೆ ಎನ್ನಲಾಗಿದೆ.
ಸಿಂಗೂ, ಟಿಕ್ರಿ, ಮತ್ತು ಗಾಜೀಪುರ ಗಡಿಯಲ್ಲಿ ತ್ರಿವರ್ಣ ಧ್ವಜ ಹಿಡಿದು ರ್ಯಾಲಿ ನಡೆಸುವುದರ ಮೂಲಕ ಸ್ವಾತಂತ್ರ್ಯ ದಿನಾಚರಣೆ ನಡೆಯಲಿದೆ.
ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಎತ್ತಿನ ಗಾಡಿಗಳಲ್ಲಿ, ಟ್ರಾಕ್ಟರ್ ಗಳಲ್ಲಿ, ಮೋಟಾರು ಸೈಕಲ್ ಗಳಲ್ಲಿ, ರಾಷ್ಟ್ರಧ್ವಜವನ್ನು ಅಳವಡಿಸಿ ಜಿಲ್ಲಾ ಕೇಂದ್ರ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ತಿರಂಗಾ ರ್ಯಾಲಿ ನಡೆಯಲಿದೆ
ಜನವರಿ 26 ರಂದು ದೆಹಲಿಯಲ್ಲಿ ನಡೆದ ಘಟನೆಯಿಂದಾಗಿ ಯಾವುದೇ ಅಹಿತಕರ ಘಟನೆಗಳು ನಡೆಯುವುದನ್ನು ತಪ್ಪಿಸಲು ರ್ಯಾಲಿಯು ದೆಹಲಿ ಸೇರಿದಂತೆ ಯಾವುದೇ ನಗರಗಳನ್ನು ಪ್ರವೇಶಿಸುವುದಿಲ್ಲ. ಆದರೆ ರೈತರ ಬೇಡಿಕೆ ಈಡೇರುವವರೆಗೂ ಚಳುವಳಿ ನಿಲ್ಲುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
