ಕೊರೋನಾ ನಿರ್ವಹಣೆಯಲ್ಲಿ ಕೇರಳ ವಿಫಲವಾಗಿಲ್ಲ: ವೀಣಾ ಜಾರ್ಜ್

ಕೇರಳ: ಕೊರೋನಾ ಸೋಂಕು ವ್ಯಾಪಿಸುತ್ತಿರುವುದನ್ನು ನಿಯಂತ್ರಿಸುವಲ್ಲಿ ಕೇರಳ ವಿಫಲವಾಗಿದೆ ಎಂದು ಬಿಂಬಿಸಲು ಎಲ್ಲೆಡೆ ಅಭಿಯಾನವೇ ನಡೆಯುತ್ತಿದೆ ಎಂದು ಕೇರಳ ಸರ್ಕಾರದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಆರೋಪಿಸಿದ್ದಾರೆ.
ಕೇರಳದಲ್ಲಿ ಕೋವಿಡ್ ಸೋಂಕಿನ ಮೂರನೇ ಅಲೆ ತೀವ್ರವಾಗಿ ವ್ಯಾಪಿಸುತ್ತಿದೆ ಎಂಬ ಸುದ್ದಿ ದೇಶದೆಲ್ಲೆಡೆ ಹರಡುತ್ತಿರುವುದರಿಂದ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಕೊರೋನ ಹೆಡೆಮುರಿ ಕಟ್ಟಲು ಸರ್ಕಾರ ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಲಾಕ್ ಡೌನ್ ಸಡಿಲಿಸಿದಾಗ ಪಾಸಿಟಿವಿಟಿ ಶೇ.12ರಷ್ಟಿತ್ತು. ಪ್ರಸಕ್ತ ನಿಯಂತ್ರಣ ಪ್ರಕ್ರಿಯೆ ಉತ್ತಮವಾಗಿದೆ. ಆದರೆ ಸರ್ಕಾರ ವಿಫಲವಾಗಿದೆ ಎಂದು ಬಿಂಬಿಸುತ್ತಿರುವುದು ದುರದೃಷ್ಟಕರ ಎಂದಿದ್ದಾರೆ.
ರಾಜ್ಯದಲ್ಲಿ ಪರೀಕ್ಷೆಯನ್ನು ಜವಾಬ್ದಾರಿಯುತವಾಗಿ, ವ್ಯಾಪಕವಾಗಿ ಹೆಚ್ಚಿಸಲಾಗಿದೆ. ಹೀಗಾಗಿ ಡೆಲ್ಟಾ ಪ್ರಕರಣಗಳು ಬೆಳಕಿಗೆ ಬಂದಿವೆ. ಜು.28ರಂದು 1.96 ಲಕ್ಷ ಪರೀಕ್ಷೆ, ಜು.29ರಂದು 1.63 ಲಕ್ಷಕ್ಕೂ ಅಧಿಕ ಪರೀಕ್ಷೆಗಳು ನಡೆದಿವೆ. ಪ್ರಾಥಮಿಕ ದ್ವಿತೀಯ, ತೃತೀಯ ಸಂಪರ್ಕಿತರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ರಾಜ್ಯದಲ್ಲಿ ಸೋಂಕಿತರು ಆಕ್ಸಿಜನ್ ಅಥವಾ ಹಾಸಿಗೆ ಕೊರತೆಯಿಂದ ಮೃತರಾಗಿಲ್ಲ ಎಂದು ತಿಳಿಸಿದ್ದಾರೆ.
