Breaking NewsLatestರಾಜಕೀಯರಾಷ್ಟ್ರೀಯ

ಸಿಧು ಕಾಮಿಡಿ ಮಧ್ಯೆಯೇ ಆಪ್ ಹವಾ; ಇಂದಿನಿಂದ ಎರಡು ದಿನ ಪಂಜಾಬ್​ನಲ್ಲಿ ಕೇಜ್ರಿವಾಲ್ ಪ್ರವಾಸ

ನವದೆಹಲಿ: ಪಂಜಾಬ್​ ಕಾಂಗ್ರೆಸ್​ನಲ್ಲಿ ನವಜೋತ್ ಸಿಂಗ್ ಸಿಧು ಪ್ರಾಯೋಜಿತ ಕಾಮಿಡಿ ನಡೆದಿರುವಾಗಲೇ, ಈ ಬಾರಿಯ ಪಂಜಾಬ್ ವಿಧಾನಸಭೆ ಚುನಾವಣೆಯನ್ನು ಪ್ರಬಲವಾಗಿ ಎದುರಿಸಲು ಸಜ್ಜಾಗುತ್ತಿರುವ ಎಎಪಿ ಮುಖ್ಯಸ್ಥ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪಂಜಾಬ್​ನಲ್ಲಿ ಎರಡು ದಿನಗಳ ಪ್ರವಾಸ ಮಾಡುತ್ತಿದ್ದಾರೆ.

ಇಂದು ಲೂಧಿಯಾನಾದಿಂದ ಕೇಜ್ರಿವಾಲ್ ಪ್ರವಾಸ ಆರಂಭಗೊಳ್ಳಲಿದೆ.

ಪಂಜಾಬ್ ಕಾಂಗ್ರೆಸ್​ನಲ್ಲಿ ಹೊತ್ತಿ ಉರಿಯುತ್ತಿರುವ ಬೆಂಕಿ ಆರಿಸಿ, ಎದುರಿಗಿರುವ ಚುನಾವಣೆಗಾಗಿ ಒಗ್ಗಟ್ಟು ಕಟ್ಟಲು ಗಾಂಧಿ ಕುಟುಂಬ ಪ್ರಯತ್ನಿಸುತ್ತಿರುವುದರ ನಡುವೆಯೇ ಆಪ್ ನಾಯಕನ ಪ್ರವಾಸ ಮಹತ್ವ ಪಡೆದಿದೆ.

ಪಂಜಾಬ್ ಪ್ರವಾಸದ ಮೊದಲ ದಿನವಾದ ಇಂದು ಕೇಜ್ರಿವಾಲ್ ಲೂಧಿಯಾನದಲ್ಲಿ ವ್ಯಾಪಾರಿಗಳ ಜೊತೆ ಸಭೆ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ. ನಾಳೆ ಅವರು ಸುದ್ದಿಗೋಷ್ಠಿಯನ್ನು ನಡೆಸಲಿದ್ದು, ಮಹತ್ವದ ಘೋಷಣೆಯೊಂದನ್ನು ಮಾಡುವ ನಿರೀಕ್ಷೆ ಇದೆ ಎನ್ನಲಾಗಿದೆ.

ಮುಂದಿನ ವರ್ಷದ ಆರಂಭದಲ್ಲಿಯೇ ಪಂಜಾಬ್ ವಿಧಾನಸಭೆ ಚುನಾವಣೆ ನಡೆಯಲಿದ್ದು, ಸಾಕಷ್ಟು ತಯಾರಿ ನಡೆಸಬೇಕಿದ್ದ ಕಾಂಗ್ರೆಸ್ ಆಗಲೇ ಅಮರೀಂದರ್ ಸಿಂಗ್ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಸಿ ಮಹಾ ಯಡವಟ್ಟು ಮಾಡಿಕೊಂಡಿದೆ. ಇದರ ಬೆನ್ನಲ್ಲೆ, ಹೊಣೆ ವಹಿಸಿಕೊಂಡ ಎರಡೇ ತಿಂಗಳಲ್ಲಿ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸಿಧು ರಾಜೀನಾಮೆ ನೀಡಿ, ಗಾಂಧಿ ಕುಟುಂಬವನ್ನು ಆಟವಾಡಿಸುತ್ತಿರುವಾಗ ಆಪ್ ಅದನ್ನು ಸರಿಯಾಗಿಯೇ ಬಳಸಿಕೊಳ್ಳಲು ಮುಂದಾಗಿದೆ.

ಆಪ್​ನ ಪಂಜಾಬ್ ಘಟಕದ ಅಧ್ಯಕ್ಷ ಭಗವಂತ್ ಮಾನ್, ಕುರ್ಚಿ ಕದನದಲ್ಲಿ ಪಂಜಾಬ್ ರಾಜ್ಯವನ್ನು ಮತ್ತು ಪಂಜಾಬ್​ ಜನತೆಯನ್ನು ಕಾಂಗ್ರೆಸ್ ಅವಮಾನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಆಪ್ ಘಟಕದಲ್ಲೂ ಕಳೆದೆರಡು ವರ್ಷಗಳಿಂದ ಇದ್ದ ಆಂತರಿಕ ಭಿನ್ನಮತ ನಿಧಾನವಾಗಿ ಹಿನ್ನೆಲೆ ಸರಿದಿದ್ದು, ಆಪ್ ನಾಯಕರು ಇದೀಗ ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿ ದಳದ ವಿಫಲತೆಯನ್ನು ಎತ್ತಿ ತೋರಿಸುತ್ತ, ತಮಗೆ ಒಂದು ಅವಕಾಶ ಕೊಟ್ಟು ನೋಡುವಂತೆ ಜನತೆಯೆದುರು ಕೇಳುತ್ತಿದ್ದಾರೆ. ಆಪ್​ಗೆ ಪಂಜಾಬ್ ಜನತೆಯಿಂದ ಬೆಂಬಲ ಸಿಗುತ್ತಿದೆ ಎಂಬುದನ್ನು ಪಕ್ಷದ ನಾಯಕರು ಪ್ರತಿಪಾದಿಸತೊಡಗಿದ್ದಾರೆ.

2017ರ ಚುನಾವಣೆಯಲ್ಲಿ 20 ಸ್ಥಾನಗಳನ್ನು ಗೆಲ್ಲುವ ಮೂಲಕ ಭರವಸೆ ಮೂಡಿಸಿದ್ದ ಆಪ್, ಈ ಬಾರಿ ದೆಹಲಿ ಮಾದರಿಯ ಆಡಳಿತದ ಭರವಸೆಯನ್ನು ಜನರ ನಡುವೆ ಬಿತ್ತುತ್ತಿದೆ. ಇದೆಲ್ಲದರ ನಡುವೆಯೇ ಇಂದಿನಿಂದ ಆರಂಭವಾಗಿರುವ ಕೇಜ್ರಿವಾಲ್ ಪ್ರವಾಸ ಪಕ್ಷದಲ್ಲಿ ಹೊಸ ನಿರೀಕ್ಷೆಗೆ ಕಾರಣವಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button