Assembly Session Adjourne: ಗದ್ದಲ-ಕೋಲಾಹಲದ ನಡುವೆ ವಿಧಾನಸಭೆ ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ಬೆಂಗಳೂರು: ವಿಧಾನಮಂಡಲದ ಅಧಿವೇಶನವನ್ನು ಇನ್ನೂ 10 ದಿನ ವಿಸ್ತರಿಸಬೇಕು. ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಸದನದಲ್ಲಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಸದಸ್ಯರು ಶುಕ್ರವಾರ ವಿಧಾನಸಭೆಯಲ್ಲಿ ಧರಣಿ ನಡೆಸಿದರು. ಈ ಧರಣಿಯಿಂದ ಸದನದಲ್ಲಿ ಗದ್ದಲ, ಕೋಲಾಹಲದ ವಾತಾವರಣ ನಿರ್ಮಾಣವಾಯಿತು. ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರ ನಡುವೆ ಬಿರುಸು ಮಾತಿನ ಚಕಮಕಿಯೂ ನಡೆಯಿತು. ಇದರ ನಡುವೆಯೇ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆಯನ್ನು ಅನಿರ್ದಿಷ್ಠಾವಧಿಗೆ ಮುಂದೂಡಿದರು.
ಇಂದು ಪ್ರಶ್ನೋತ್ತರ ಕಲಾಪ ಮುಗಿಯುತ್ತಿದ್ದಂತೆಯೇ ಕಾಂಗ್ರೆಸ್ಸಿನ ಗಣೇಶ್, ರಂಗನಾಥ್, ರೂಪಕಲಾ, ಆನಂದ ನ್ಯಾಮೇಗೌಡ, ಶರತ್ ಬಚ್ಚೇಗೌಡ ಸೇರಿದಂತೆ ಹಲವು ಸದಸ್ಯರು, ತಮ್ಮ ಕ್ಷೇತ್ರಗಳಿಗೆ ಸಂಬಂಧಿಸಿದ ಸಮಸ್ಯೆಗಳ ಪ್ರಸ್ತಾಪಿಸಿ, ಚರ್ಚೆ ನಡೆಸಲು ಅವಕಾಶ ಸಿಕ್ಕಿಲ್ಲ. ಅವಕಾಶ ನೀಡಬೇಕು ಎಂದು ಆಗ್ರಹಿಸಿ ವಿಧಾನ ಸಭಾಧ್ಯಕ್ಷರ ಮುಂದಿನ ಪೀಠಕ್ಕೆ ಆಗಮಿಸಿ ಧರಣಿ ಆರಂಭಿಸಿದರು. ಇವರ ಜತೆ ಎಲ್ಲ ಕಾಂಗ್ರೆಸ್ ಸದಸ್ಯರು ಜತೆಗೂಡಿ ಸದನವನ್ನು ಹತ್ತು ದಿನಗಳ ಕಾಲ ವಿಸ್ತರಿಸಿ ಎಂದು ಒತ್ತಾಯಿಸಿ ಘೋಷಣೆ ಕೂಗಿದರು. ಇದರಿಂದ ಸದನದಲ್ಲಿ ಗದ್ದಲ, ಕೋಲಾಹಲದ ವಾತಾವರಣ ರೂಪುಗೊಂಡಿತು.
ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಹಲವು ಸದಸ್ಯರು ತಮ್ಮ ಕ್ಷೇತ್ರಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪ್ರಸ್ತಾಪಿಸಲು ಅವಕಾಶ ಸಿಕ್ಕಿಲ್ಲ. ಸದನವನ್ನು ಹತ್ತು ದಿನಗಳ ಕಾಲ ವಿಸ್ತರಿಸಿ ಎಂದು ಒತ್ತಾಯಿಸಿದರು.
ನಾಗಪುರದ ನೀತಿ ಬೇಡ:
ಅಕ್ಟೋಬರ್ 1 ರಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡುತ್ತಿದ್ದೀರಿ. ನಾಗಪುರದ ನೀತಿ ಇದಾಗಿದೆ. ಇದು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲ. ಆರ್ಎಸ್ಎಸ್ ಶಿಕ್ಷಣ ನೀತಿ ಎಂದು ವಾಗ್ದಾಳಿ ನಡೆಸಿದರು. ಸಿದ್ಧರಾಮಯ್ಯನವರ ಮಾತಿಗೆ ಉತ್ತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹೌದು, ಇದು ಆರ್ಎಸ್ಎಸ್ ಶಿಕ್ಷಣ ನೀತಿಯೆ. ರಾಷ್ಟ್ರೀಯ ಸ್ವಯಂ ಸೇವಕ ಶಿಕ್ಷಣ ನೀತಿ ಎಂದೇ ಹೇಳಿ ಪರವಾಗಿಲ್ಲ. ಆರ್ಎಸ್ಎಸ್ ರಾಷ್ಟ್ರೀಯತೆಯನ್ನು ಪ್ರತಿಪಾದಿಸುವ ರಾಷ್ಟ್ರ ನಿರ್ಮಾಣಕ್ಕೆ ಬದ್ಧವಾಗಿದೆ. ನೂತನ ಶಿಕ್ಷಣ ನೀತಿಯು ಭವಿಷ್ಯದಲ್ಲಿ ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ಬುನಾದಿಯಾಗಲಿದೆ. ಯುವಜನರ ಭವಿಷ್ಯಕ್ಕೂ ಉತ್ತಮ ಎಂದರು.
ಕಸ್ತೂರಿ ರಂಗನ್ ನೇತೃತ್ವದ ಸಮಿತಿ ಹಲವು ವರ್ಷಗಳ ಕಾಲ ಅಧ್ಯಯನ ಮಾಡಿ ಈ ನೀತಿ ರೂಪಿಸಿದೆ. ಜಾರಿ ಮಾಡೇ ಮಾಡುತ್ತೇವೆ. ಇದರಲ್ಲಿ ಬದಲಾವಣೆ ಇಲ್ಲ ಎಂದೂ ಸಿಎಂ ಎದಿರೇಟು ನೀಡಿದರು. ಇದರಿಂದ ಕೆರಳಿದ ಸಿದ್ಧರಾಮಯ್ಯ, ಈ ರೀತಿ ಸರ್ವಾಧಿಕಾರದಿಂದ ವರ್ತಿಸುವುದು ಸರಿಯಲ್ಲ. ನಿಮ್ಮ ತಾಲಿಬಾನ್ ಧೋರಣೆಯನ್ನು ಒಪ್ಪಲ್ಲ. ಪ್ರಜಾಪ್ರಭುತ್ವದಲ್ಲಿ ಚರ್ಚೆಯಾಗಬೇಕು. ಚರ್ಚೆಯಾಗದೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡುವುದು ಸರಿಯಲ್ಲ ಎಂದರು.
ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ , ಶಿಕ್ಷಣ ನೀತಿಯನ್ನು ಸಮರ್ಥಿಸಿಕೊಂಡು, ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಇದನ್ನು ಜಾರಿ ಮಾಡಿದ್ದೇವೆ. ಇದು ಆರ್ಎಸ್ಎಎಸ್ ಶಿಕ್ಷಣ ನೀತಿ ಎಂದು ಹೇಳಿದರೆ ಅದನ್ನು ಹೆಮ್ಮೆಯಿಂದ ಸ್ವೀಕರಿಸುತ್ತೇವೆ ಎಂದು ಗದಲ್ಲದಲ್ಲೇ ಹೇಳಿದರು.
ಈ ಹಂತದಲ್ಲಿ ಕಾಂಗ್ರೆಸ್ ಸದಸ್ಯರು, ಘೋಷಣೆಗಳನ್ನು ಕೂಗತೊಡಗಿದರು ಅದಕ್ಕೆ ಪ್ರತಿಯಾಗಿ ಆಡಳಿತಪಕ್ಷದ ಸದಸ್ಯರು ಘೋಷಣೆಗಳನ್ನು ಕೂಗಿದ್ದರಿಂದ ಸದನದಲ್ಲಿ ಗದ್ದಲ ತಾರಕಕ್ಕೇರಿ ಕೋಲಾಹಲದ ವಾತಾವರಣ ನಿರ್ಮಾಣಗೊಂಡಿತು. ಧರಣಿ ನಿರತ ಕಾಂಗ್ರೆಸ್ ಸದಸ್ಯರು ಆರ್ಎಸ್ಎಸ್ ಶಿಕ್ಷಣ ನೀತಿಯನ್ನು ಜಾರಿ ಮಾಡಿದ್ದೀರಾ ಗೂಡ್ಸೆ ವಿಶ್ವವಿದ್ಯಾಲಯ ಯಾವಾಗ ಎಂದು ಏರಿದ ಧ್ವನಿಯಲ್ಲಿ ಘೋಷಣೆಗಳನ್ನು ಕೂಗಲಾರಂಭಿಸಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರು ಆರ್ಎಸ್ಎಸ್ ಜಿಂದಾಬಾಂದ್ ಎಂಬ ಘೋಷಣೆಗಳನ್ನು ಹಾಕಿದರು.
ಧರಣಿ ನಿರತ ಕಾಂಗ್ರೆಸ್ ಸದಸ್ಯರು ಸರ್ಕಾರದ ವಿರುದ್ಧ, ರಾಷ್ಟ್ರೀಯ ಶಿಕ್ಷಣ ನೀತಿ ವಿರುದ್ಧ ಭಿತ್ತಿ ಪತ್ರ ಪ್ರದರ್ಶಿಸಿ ಘೋಷಣೆ ಹಾಕುವುದನ್ನು ಮುಂದುವರೆಸಿದರು. ಹಾಗೆಯೇ ಪ್ರತಿಯಾಗಿ ಬಿಜೆಪಿ ಸದಸ್ಯರುಗಳು ಆರ್ಎಸ್ಎಸ್ ಪರ, ಮೋದಿ ಪರ, ಸರ್ಕಾರದ ಪರ ಘೋಷಣೆಗಳನ್ನು ಕೂಗ ತೊಡಗಿದರು. ಈ ಗದ್ದಲದಲ್ಲೇ ಸಭಾಧ್ಯಕ್ಷರು ಕೊರೊನಾಗೆ ಸಂಬಂಧಿಸಿದಂತೆ ಸರ್ಕಾರದ ಉತ್ತರವನ್ನು ಮಂಡಿಸಲು ಸೂಚನೆ ನೀಡಿ, ಗಮನ ಸೆಳೆಯುವ ಸೂಚನೆಗಳ ಉತ್ತರಗಳನ್ನು ಮಂಡಿಸಿ ಸದನದ ಕಲಾಪಗಳ ವರದಿಯನ್ನು ತರಾತುರಿಯಲ್ಲಿ ಓದಿದರು.
ನಂತರ ಇಂದು ಮಧ್ಯಾಹ್ನ ಲೋಕಸಭಾಧ್ಯಕ್ಷ ಓಂಬಿರ್ಲಾ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಅಧಿವೇಶನದಲ್ಲಿ ಪಾಲ್ಗೊಳ್ಳಿ ಅಧಿವೇಶನ ಬಹಿಷ್ಕರಿಸುವುದು ಸರಿಯಲ್ಲ. ನಿಮ್ಮ ತೀರ್ಮಾನಗಳನ್ನು ಪುನರ್ ಪರಿಶೀಲಿಸಿ ಎಂದು ಕಾಂಗ್ರೆಸ್ ಸದಸ್ಯರಲ್ಲಿ ಮನವಿ ಮಾಡಿದರು. ಗದ್ದಲ, ಘೋಷಣೆಗಳ ನಡುವೆಯೇ ಸದನವನ್ನು ಅನಿರ್ಧಿಷ್ಠಾವಧಿಗೆ ಮುಂದೂಡಿದರು.
