Breaking NewsLatestಜಿಲ್ಲಾ ಸುದ್ದಿಮೆಟ್ರೋರಾಜಕೀಯರಾಜ್ಯಸುದ್ದಿ

ಪಡಿತರರಿಗೆ 1 ಕೆಜಿ ಹೆಚ್ಚುರಿ ಅಕ್ಕಿ, ಪಂಚಾಯಿತಿ ಮಟ್ಟದಲ್ಲಿ ವಸತಿ ರಹಿತರಿಗೆ ನಿವೇಶನದ ಭರವಸೆ

ಬೆಂಗಳೂರು: ಕೋವಿಡ್ ನಿರ್ವಹಣೆ ವಿಚಾರದಲ್ಲಿ ರಾಜ್ಯ ಸರ್ಕಾರ ಅಗತ್ಯಕ್ಕೆ ಅನುಸಾರವಾಗಿ ಕೆಲಸ ಮಾಡಿದೆ. ಇದರಿಂದ ರಾಜ್ಯದಲ್ಲಿ ಸಾವಿನ ಸಂಖ್ಯೆ ಕಡಿಮೆಯಾಗಿದೆ ಎಂದು ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ.  ಸೋಮವಾರದಿಂದ ಆರಂಭವಾದ ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊರೋನಾ ರೋಗಾಣುವಿನಿಂದ ಉದ್ಭವಿಸಿದ ಕೆಟ್ಟ ಪರಿಣಾಮಗಳನ್ನು ನಿರ್ವಹಿಸಲು ಹಾಗೂ ನಿವಾರಿಸಲು ಅತ್ಯುತ್ತಮವಾಗಿ ಶ್ರಮಿಸಿದೆ ಎಂದರು. ಕೋವಿಡ್ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಎದುರಾದ ಸವಾಲುಗಳು ಮತ್ತು ಸಂಕಷ್ಟಗಳು ಇದ್ದಾಗಲೂ ಸಹ ಸರ್ಕಾರ ಅದನ್ನು ಸಮರ್ಥವಾಗಿ ನಿರ್ವಹಿಸಿದೆ ಎಂದು ಹೇಳಿದರು.

ಸಮರೋಪಾದಿಯಲ್ಲಿ ಲಸಿಕೆ

ರಾಜ್ಯದಲ್ಲಿ ಕೋವಿಡ್ ಲಸಿಕೆ ಕಾರ್ಯಕ್ರಮವನ್ನು ಸಮರೋಪಾದಿಯಲ್ಲಿ ನಡೆಸಲಾಗುತ್ತಿದೆ. ದೈನಂದಿನ 6 ಸಾವಿರ ಲಸಿಕಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಕಳೆದ ಫೆ.21ವರೆಗೆ ಒಟ್ಟು 9.33ಕೋಟಿ ಅರ್ಹ ಫಲಾನುಭವಿಗಳಿಗೆ 1 ನೇ ಡೋಸ್, 4.18 ಕೋಟಿ ಮಂದಿಗೆ 2ನೇ ಡೋಸ್ ನೀಡಲಾಗಿದೆ. ಇದು ಒಟ್ಟು ಜನಸಂಖ್ಯೆಯ ಶೇ.100 ರಷ್ಟು ಮಂದಿಗೆ ಮೊದಲ ಮತ್ತು ಶೇ.85 ರಷ್ಟು ಮಂದಿಗೆ 2 ನೇ ಡೋಸ್ ನೀಡಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಒಟ್ಟು 6 ಕೋಟಿ ಟೆಸ್ಟ್ ಗಳನ್ನು ನಡೆಸಲಾಗಿದೆ. ದೇಶದಲ್ಲೇ ಅತಿ ಹೆಚ್ಚು ಟೆಸ್ಟ್ ನಡೆಸಿದ ರಾಜ್ಯಗಳಲ್ಲಿ ಒಂದು. ಕೋವಿಡ್ ಹೊಸ ರೂಪಾಂತರಿ ತಳಿಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಜೀನೋಮ್ ಸೀಕ್ವೆನ್ಸಿಂಗ್ ನಡೆಸಲು ರಾಜ್ಯದಲ್ಲಿ 5 ಇನ್ಸಾಗ್ ಪ್ರಮಾಣಿತ ಪ್ರಯೋಗ ಶಾಲೆಗಳು ಲಭ್ಯ ಇದೆ ಎಂದು ಹೇಳಿದರು.

ಹಾಸಿಗೆ ವ್ಯವಸ್ಥೆ

ರಾಜ್ಯದ ಆಸ್ಪತ್ರೆಗಳಲ್ಲಿ ಒಟ್ಟು 1,94,363 ಹಾಸಿಗೆಗಳು ಸಿದ್ದವಾಗಿರಿಸಲಾಗಿದೆ. ಈ ಪೈಕಿ 55,256 ಹೆಚ್ ಡಿಯು ಹಾಸಿಗೆಗಳು, 7,216 ಐಸಿಯು ಬೆಡ್ ಗಳು ಹಾಗೂ 6,123 ಐಸಿಯು-ವೆಂಟಿಲೇಟರ್ ಬೆಡ್ ಗಳು ಜಿಲ್ಲಾ, ತಾಲೂಕು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಲಭ್ಯ ಇವೆ ಎಂದು ತಿಳಿಸಿದರು.

ಪಡಿತದಾರರಿಗೆ ಹೆಚ್ಚುವರಿ ಅಕ್ಕಿ, ವಸತಿ ರಹಿತರಿಗೆ ನಿವೇಶನ

ಪಡಿತರದಾರರಿಗೆ ಪ್ರತಿ ತಿಂಗಳು ಈಗ ನೀಡಲಾಗುತ್ತಿರುವ 5 ಕೆಜಿ ಅಕ್ಕಿ ಜತೆ ಹೆಚ್ಚುವರಿಯಾಗಿ 1 ಕೆಜಿ ಅಕ್ಕಿಯನ್ನು ಬರುವ ಏಪ್ರಿಲ್ 1 ರಿಂದ ನೀಡಲು ಉದ್ದೇಶಿಸಲಾಗಿದೆ.  75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ನೆನಪಿಗಾಗಿ ಅಮೃತ ಗ್ರಾಮೀಣ ವಸತಿ ಯೋಜನೆ ಅಡಿ 750 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ವಸತಿರಹಿತರನ್ನು ಗುರುತಿಸಿ ಸರ್ವರಿಗೂ ವಸತಿ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ರಾಜ್ಯಪಾಲರು ತಿಳಿಸಿದರು.

ಮರಳಿ ತಾಯ್ನಾಡಿಗೆ ಯೋಜನೆಗೆ ಅನುದಾನ

ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ(ಎನ್ ಇಪಿ) ಜಾರಿಗೊಳಿಸಲಾಗಿದೆ.  ವಿದೇಶದಲ್ಲಿರುವ ದೇಶೀ ಸಂಜಾತರ ಅರಿವನ್ನು ಸ್ವದೇಶದಲ್ಲೇ ಬಳಸಿಕೊಳ್ಳು “ಮರಳಿ ತಾಯ್ನಾಡಿಗೆ’ ಯೋಜನೆ ಜಾರಿಗೆ ಸೂಕ್ತ ನೀತಿ ಹಾಗೂ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಬಿಡದಿಯಲ್ಲಿ ವಿದ್ಯುತ್ ಘಟಕ ಸ್ಥಾಪನೆ

ರಾಮನಗರ ಜಿಲ್ಲೆ ಬಿಡದಿಯಲ್ಲಿ, ಬಿಬಿಎಂಪಿ ಸರಬರಾಜು ಮಾಡುವ 600ಟಿಪಿಡಿ ನಷ್ಟು ಘನ ತ್ಯಾಜ್ಯವನ್ನು ಬಳಸಿ 11.5 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಘಟಕ ಸ್ಥಾಪಿಸಲು ಅನುಮೋದಿಸಲಾಗಿದೆ. ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಯನ್ನು ಬೆಳಗಾವಿ ಸುವರ್ಣಸೌಧದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ಬೆಂಗಳೂರಿನಂತೆ ರಾಜ್ಯದಲ್ಲಿ ತೀವ್ರ ಮಾಲಿನ್ಯ ಹೊಂದಿದ ಇತರ ನಗರಗಳಲ್ಲಿಯೂ ವಾಯು ಗುಣಮಟ್ಟ ಮಾಪನ ಕೇಂದ್ರಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ.

ಭದ್ರ ಮೇಲ್ದಂಡೆ ಯೋಜನೆಗೆ ಅನುಮೋದನೆ

ಕೇಂದ್ರ ಸರ್ಕಾರದಿಂದ ಭದ್ರ ಮೇಲ್ದಂಡೆ ಯೋಜನೆಗೆ ಹೂಡಿಕೆಯೂ ಸೇರಿದಂತೆ ಎಲ್ಲಾ ಶಾಸನ ಬದ್ದ ಅನುಮೋದನೆ ದೊರೆತಿದ್ದು, ಪ್ರಸ್ತುತ ರಾಷ್ಟ್ರೀಯ ಯೋಜನೆಯ ಮಾನ್ಯತೆ ಪಡೆಯುವ ಕಾರ್ಯ ಅಂತಿಮ ಹಂತದಲ್ಲಿದೆ ಎಂದು ರಾಜ್ಯಪಾಲರು ತಿಳಿಸಿದರು.

ಮೆಟ್ರೋ 2ನೇ ಹಂತ ಈ ವರ್ಷ ಪೂರ್ಣ

ಬೆಂಗಳೂರು ಮೆಟ್ರೋ ರೈಲು ಯೋಜನೆ ಹಂತ-2ರಲ್ಲಿ 32.54 ಕಿ.ಮೀ ಉದ್ದದ ಮಾರ್ಗವನ್ನು 2022-23ನೇ ಸಾಲಿನಲ್ಲಿ ಮುಕ್ತಾಯಗೊಳಿಸಿ ಸಾರ್ವಜನಿಕ ಸೇವೆಗೆ ಅರ್ಪಿಸಲಾಗುವುದು ಎಂದು ತಿಳಿಸಿದರು. ಬೆಳ್ಳಂದೂರು ಮತ್ತು ವರ್ತೂರು ಕೆರೆ ಮಾಲಿನ್ಯ ತಡೆಯಲು ಕೋರಮಂಗಲ ಮತ್ತು ಚಲಘಟ್ಟ ಕಣಿವೆಯಲ್ಲಿರುವ ಹಳೆಯ ತ್ಯಾಜ್ಯ ನೀರಿನ ಶುದ್ದೀಕರಣ ಘಟಕಗಳನ್ನು ಉನ್ನತೀಕರಣಗೊಳಿಸಲಾಗುವುದು,

ನಕ್ಷೆ, ಆಕಾರ್ ಬಂದ್ ಗಣಕೀಕರಣ

ರಾಜ್ಯವು ಹಾಲು ಉತ್ಪಾದನೆಯಲ್ಲಿ 11 ನೇ ಸ್ಥಾನ, ಮೊಟ್ಟೆ ಉತ್ಪಾದನೆಯಲ್ಲಿ 6 ನೇ ಸ್ಥಾನ, ಮಾಂಸ ಉತ್ಪಾದನೆಯಲ್ಲಿ 10 ನೇ ಸ್ಥಾನ ಹೊಂದಿದ್ದು, ರಾಜ್ಯದ ಒಟ್ಟು ಜಿ.ಡಿ.ಪಿಗೆ ಶೇ.3.53ರಷ್ಟು ಕೊಡುಗೆ ನೀಡುತ್ತಿದೆ. ಕಂದಾಯ ಇಲಾಖೆ ದಾಖಲೆ ಮತ್ತು ನಕ್ಷೆ, ಆಕಾರ್ ಬಂದ್ ಮತ್ತಿತರ ಸಾರ್ವಜನಿಕ ಸೇವೆಗಳನ್ನು ಗಣಕೀಕರಣಗೊಳಿಸುತ್ತಿದೆ.

ಬೆಂಗಳೂರು ನಗರ, ತುಮಕೂರು, ರಾಮನಗರ, ಬೆಳಗಾವಿ, ಹಾಸನ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರತೀಯ ಸರ್ವೇಕ್ಷಣ ಸಂಸ್ಥೆ ಸಹಯೋಗದಲ್ಲಿ ಡ್ರೋನ್/ಯುಎವಿ ಆಧಾರಿತ ಭೂಮಾಪನ ಕಾರ್ಯ ನಡೆಸಲಾಗುತ್ತಿದೆ ಎಂದು ರಾಜ್ಯಪಾಲರು ತಮ್ಮ ಭಾಷಣದಲ್ಲಿ ತಿಳಿಸಿದರು.

ಕೈಗಾರಿಕಾ ಕಾರಿಡಾರ್

ಬೆಂಗಳೂರು-ಮುಂಬಯಿ ಮತ್ತು ಬೆಂಗಳೂರು-ಚೆನ್ನೈ ಕೈಗಾರಿಕಾ ಕಾರಿಡಾರ್ ಗಳಲ್ಲಿ ಕೈಗಾರಿಕಾ ಟೌನ್ ಶಿಪ್ ಗಳನ್ನು ಸ್ಥಾಪಿಸಲು ಪ್ರಸ್ತಾವನೆ ಇದೆ. ಭಾರತ ಇಂಡಿಯಾ ಇನ್ನೋವೇಷನ್ ಇಂಡೆಕ್ಸ್ 2020ರ ಅಡಿಯಲ್ಲಿ ಪ್ರಮುಖ ರಾಜ್ಯಗಳು ವಿಭಾಗದಲ್ಲಿದೆ ಕರ್ನಾಟಕ ಅಗ್ರ ಸ್ಥಾನದಲ್ಲಿದೆ ಎಂದು ಅವರು ಹೇಳಿದರು.

Spread the love

Related Articles

Leave a Reply

Your email address will not be published. Required fields are marked *

Back to top button