Karnataka Budget : ನಾಳೆ ಸಿಎಂ ಬೊಮ್ಮಾಯಿ ಮೊದಲ ಬಜೆಟ್ ಮಂಡನೆ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಳೆ ತಮ್ಮ ಚೊಚ್ಚಲ ಬಜೆಟ್ ಮಂಡಿಸಲಿದ್ದು, ಮಾರ್ಚ್ 4 ರ ಶುಕ್ರವಾರ ಮಧ್ಯಾಹ್ನ 12.30ಕ್ಕೆ ಕರ್ನಾಟಕ ಬಜೆಟ್ 2022-23 ವಿಧಾನ ಮಂಡಲದಲ್ಲಿ ಮಂಡಿಸಲಿದ್ದಾರೆ.
ಈ ಬಜೆಟ್ ನಲ್ಲಿ ಹಾಲಿನ ಪ್ರೋತ್ಸಾಹಧನ ಹೆಚ್ಚಳ, ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಸೇರಿದಂತೆ ಮಹತ್ವದ ಯೋಜನೆಗಳನ್ನು ಘೋಷಿಸುವ ನಿರೀಕ್ಷೆ ಇದೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಒಂದು ವರ್ಷ ಮಾತ್ರ ಬಾಕಿ ಇರುವಾಗ ಬಜೆಟ್ ಮಂಡನೆ ಆಗುತ್ತಿರುವುದರಿಂದ ಸಹಜವಾಗಿಯೇ ಬಜೆಟ್ ಎಲ್ಲಿಲ್ಲದ ಮಹತ್ವ ಪಡೆದುಕೊಂಡಿದೆ. ಇದು ಭರಪೂರ ಕೊಡುಗೆಗಳ ಬಜೆಟ್ ಆಗಲಿದೆಯೇ ಎಂಬ ಚರ್ಚೆಗಳು ಸಹ ನಡೆಯುತ್ತಿವೆ.
ಕೋವಿಡ್ ಆರ್ಥಿಕ ಸಂಕಷ್ಟದ ಮಧ್ಯೆ ಜನಪ್ರಿಯ ಹಾಗೂ ಜನರಿಗೆ ಹೊರೆಯಾಗದಂತಹ ಬಜೆಟ್ ಮಂಡಿಸುವ ಸವಾಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮುಂದಿದೆ. ಕೋವಿಡ್ ಆರ್ಥಿಕ ಸಂಕಷ್ಟ, ರಾಜ್ಯದ ಆದಾಯ ಸಂಗ್ರಹಣೆ ನಿರೀಕ್ಷಿತ ಗುರಿ ಮುಟ್ಟದಿರುವುದು, ಕೇಂದ್ರ ಸರ್ಕಾರದ ಅನುದಾನಗಳು ಹಾಗೂ ಜಿಎಸ್‌ಟಿ ಪರಿಹಾರಗಳು ಸಕಾಲಕ್ಕೆ ಬಿಡುಗಡೆಯಾಗದಿರುವುದು ಸರ್ಕಾರಕ್ಕೆ ಆರ್ತಿಕ ಸವಾಲುಗಳನ್ನು ತಂದೊಡ್ಡಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬೊಮ್ಮಾಯಿಯವರು ಬಜೆಟ್ ಮಂಡಿಸುತ್ತಿದ್ದಾರೆ.
ಮೊದಲಿನಿಂದಲೂ ರಾಜ್ಯದ ಪ್ರತಿ ಬಜೆಟ್‌ನಲ್ಲೂ ರೈತ ಸಮುದಾಯಕ್ಕೆ ವಿಶೇಷ ಆದ್ಯತೆ ನೀಡಲಾಗುತ್ತಿದ್ದು, ಈ ಬಜೆಟ್‌ನಲ್ಲೂ ಕೃಷಿ ವಲಯ ಹೆಚ್ಚಿನ ನಿರೀಕ್ಷೆ ಹೊಂದಿದೆ.
ಈ ಸಲದ ರಾಜ್ಯ ಬಜೆಟ್‌ನ ಗಾತ್ರ 2.60 ಲಕ್ಷ ಕೋಟಿ ರೂ.ಗಳನ್ನು ದಾಟಬಹುದು ಎಂದು ಅಂದಾಜಿಸಲಾಗಿದೆ. ಕಳೆದ ಬಾರಿ ಬಜೆಟ್‌ನ ಗಾತ್ರ 2.46 ಲಕ್ಷ ಕೋಟಿ ರೂ.ಗಳಿತ್ತು. ಬಜೆಟ್‌ಗೆ ಅಂತಿಮ ರೂಪ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಲವು ದಿನಗಳಿಂದ ಸಭೆಗಳನ್ನು ನಡೆಸಿದ್ದಾರೆ.
