ವಾಟಾಳ್ ಮೇಲೆ ಗೌರವವಿದೆ, ಕರ್ನಾಟಕ ಬಂದ್ ಬೆಂಬಲಿಸುವುದಿಲ್ಲ: ನಾರಾಯಣ ಗೌಡ

ಬೆಂಗಳೂರು : ಮಹಾರಾಷ್ಟ್ರ ಏಕೀಕರಣ ಸಮಿತಿ ನಿಷೇಧಿಸಬೇಕು ಎಂದು ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಸೇರಿದಂತೆ ಕನ್ನಡಪರ ಸಂಘಟನೆಗಳು ಹೊಸ ವರ್ಷದ ಮುನ್ನ ದಿನವಾದ ಡಿ.31 ರಂದು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಕನ್ನಡ ರಕ್ಷಣಾ ವೇದಿಕೆ ಬೆಂಬಲಿಸುವುದಿಲ್ಲ. ಬದಲಿಯಾಗಿ ಡಿ.28ರಂದು ಜಿಲ್ಲಾಧಿಕಾರಿಗಳ ಕಚೇರಿ ಮತ್ತು ಡಿ.30ರಂದು ರಾಜಭವನ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಹೇಳಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಎಂಇಎಸ್ ಮತ್ತು ಶಿವಸೇನೆ ವಿರುದ್ಧ ನಮ್ಮ ಹೋರಾಟ ನಿರಂತರ ಎಂದು ಹೇಳಿದ್ದಾರೆ.
ಡಿಸೆಂಬರ್ 31ರಂದು ಕೆಲವು ಕನ್ನಡ ಸಂಘಟನೆಗಳು ಕರೆದಿರುವ ಕರ್ನಾಟಕ ಬಂದ್ ಗೆ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲ ಇರುವುದಿಲ್ಲ. ಡಿಸೆಂಬರ್ 31 ರಂದು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಬಂದ್ ನಲ್ಲಿ ಪಾಲ್ಗೊಳ್ಳುವುದಿಲ್ಲ. ಎಂಇಎಸ್ ಮತ್ತು ಶಿವಸೇನೆಗಳ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ ಎಂದಿದ್ದಾರೆ.
ಕಳೆದ ಎರಡು ವರ್ಷಗಳಿಂದ ಕೋವಿಡ್ ನಿಂದಾಗಿ ರಾಜ್ಯದ ಜನರು ನೊಂದು ನಲುಗಿದ್ದಾರೆ. ಸರ್ಕಾರವೇ ನೂರಾರು ದಿನಗಳ ಲಾಕ್ ಡೌನ್ ಹೇರಿದ ಪರಿಣಾಮವಾಗಿ ಜನಸಾಮಾನ್ಯರು ಸಾಕಷ್ಟು ಸಮಸ್ಯೆ ಎದುರಿಸಿದ್ದಾರೆ. ಇಂಥ ಸಂದರ್ಭದಲ್ಲಿ ಬಂದ್ ಕರೆ ನೀಡುವುದು ಎಷ್ಟು ಸರಿ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ಮೊದಲಿನಿಂದಲೂ ಈ ಬಗೆಯ ದಿಢೀರ್ ಬಂದ್ ಕರೆಗಳಿಂದ ದೂರ ಉಳಿಯುತ್ತ ಬಂದಿದೆ. ಬಂದ್ ಎಲ್ಲ ಸಮಸ್ಯೆಗಳಿಗೂ ಪರಿಹಾರವಲ್ಲ, ಅದೊಂದೇ ಚಳವಳಿಯ ಮಾರ್ಗವಲ್ಲ. ಬಂದ್ ಚಳವಳಿಯ ಕೊನೆಯ ಅಸ್ತ್ರವಾಗಬೇಕು ಎಂಬುದು ನಮ್ಮ ನಿಲುವು ಎಂದು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ಕರ್ನಾಟಕದಾದ್ಯಂತ ಭಯೋತ್ಪಾದಕ ಸಂಘಟನೆಗಳಂತೆ ಕಾರ್ಯನಿರ್ವಹಿಸುತ್ತಿರುವ ಎಂಇಎಸ್ ಮತ್ತು ಶಿವಸೇನೆಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸತತ ಹೋರಾಟಗಳನ್ನು ನಡೆಸಿಕೊಂಡುಬಂದಿದೆ. ಮುಂದೆಯೂ ಈ ಚಳವಳಿ ಮುಂದುವರೆಯಲಿದೆ ಎಂದು ಹೇಳಿದ್ದಾರೆ.
ಎಂಇಎಸ್ ಮತ್ತು ಶಿವಸೇನೆ ನಿಷೇಧಿಸಲು ಒತ್ತಾಯಿಸಿ ಡಿಸೆಂಬರ್ 28ರಂದು ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಗು ಡಿ. 30 ರಂದು ‘ರಾಜಭವನ ಮುತ್ತಿಗೆ’ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ. ಈ ಸಂಘಟನೆಗಳನ್ನು ನಿಷೇಧಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೇಲೆ ಒತ್ತಡವನ್ನು ಹೇರಲಿದ್ದೇವೆ ಎಂದು ನಾರಾಯಣಗೌಡ ಹೇಳಿದ್ದಾರೆ.
