ಬಿಜೆಪಿ ಪಕ್ಷ ಒಬ್ಬ ವ್ಯಕ್ತಿಯ ವರ್ಚಸ್ಸಿನ ಮೇಲಿರುವ ಪಕ್ಷ: ಹೆಚ್ ಡಿ ದೇವೇಗೌಡ

ಕಲಬುರಗಿ: ಬಿಜೆಪಿ ಪಕ್ಷವನ್ನು ಬಿಜೆಪಿ ಎನ್ನುವ ಬದಲಾಗಿ ನರೇಂದ್ರ ಮೋದಿ ಪಕ್ಷ ಅಂತ ಕರೆಯೋದು ಸೂಕ್ತ, ಯಾಕೆಂದ್ರೆ ಪಕ್ಷದ ಹೆಸರಿನಲ್ಲಿ ಚುನಾವಣೆ ಮಾಡುವ ಬದಲು ಮೋದಿ ಹೆಸರಿನಲ್ಲಿ ಚುನಾವಣೆ ಮಾಡ್ತಿದ್ದಾರೆ. ಹಾಗಾಗಿ ಮೋದಿ ಪಾರ್ಟಿ ಅಂತ ನಾನು ಕರೆಯುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೆಗೌಡ ಬಿಜೆಪಿಯನ್ನು ಕುಟುಕಿದ್ದಾರೆ.
ಒಬ್ಬ ವ್ಯಕ್ತಿಯ ಸಕ್ಸಸ್ ನಲ್ಲಿ ಬಿಜೆಪಿ ಪಾರ್ಟಿ ನಡೆಯುತ್ತಿದೆ. ಆದರೆ ಮುಂದೇನು ಆಗುತ್ತೋ ಅದು ನನಗೆ ಗೊತ್ತಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಬಿಜೆಪಿಗೆ ಮುಂದಿನ ದಿನಗಳಲ್ಲಿ ಹಿನ್ನಡೆಯಾಗಲಿದೆ ಎಂಬ ಭವಿಷ್ಯ ನುಡಿದರು.
ಬಿಜೆಪಿ ಹಾಗೂ ಕಾಂಗ್ರೆಸ್ ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಒಂದಕ್ಕೆ ಶಕ್ತಿ ಹೀನವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಕಾಂಗ್ರೆಸ್ ದೇಶದ ಎರಡು ರಾಜ್ಯದಲ್ಲಿ ಮಾತ್ರ ಅಧಿಕಾರದಲ್ಲಿ ಇದೆ. ಇದಕ್ಕೆ ಕಾರಣ ಏನು? ಯಾರು? ಅಂತಾ ಅವರೆ ಹುಡುಕಬೇಕು. ಮುಂದಿನ ಐದು ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಎಷ್ಟು ಬೆಳೆಯುತ್ತೆ ಅನ್ನೋದು ಈಗಲೇ ಹೇಳೊಕೆ ಆಗೋದಿಲ್ಲ. ಎರಡು ಪಕ್ಷದವರು 2023 ಕ್ಕೆ ಜೆಡಿಎಸ್ ಸಂಪೂರ್ಣ ನಾಶ ಮಾಡುವದಾಗಿ ಹೇಳ್ತಿದ್ದಾರೆ. ಮತದಾರರು ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಇನ್ನು ರಾಮನಗರದಲ್ಲಿ ಸಚಿವ ಹಾಗೂ ಸಂಸದರ ಗಲಾಟೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಎರಡು ಪಕ್ಷದ ನಾಯಕರು ಈ ಮಟ್ಟಕ್ಕೆ ಇಳಿಯಬಾರದು. ಇಂತಹ ಘಟನೆಗಳು ಆಗಬಾರದು ಅಷ್ಟೆ ಎಂದರು.
ಕೊರೊನಾ ಸಮಯದಲ್ಲಿ ಕಾಂಗ್ರೆಸ್ ಮೇಕೆದಾಟು ಹೋರಾಟ
ಮೇಕೆದಾಟು ಕಾಂಗ್ರೆಸ್ ಹೋರಾಟ ವಿಚಾರವಾಗಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ನಲ್ಲಿ ದಿನಾಂಕ ನಿಗಧಿ ಮಾಡಿದ್ದಾರೆ ಅಂತಾ ಕೇಳಿದ್ದೀನಿ. ಇಂತಹ ಸಂದರ್ಭದಲ್ಲಿ ಹೋರಾಟ ಸರಿಯಲ್ಲ, ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕೇಂದ್ರ ಸಚಿವ ನಿತಿನ್ ಗಡ್ಕರಿ ತಾತ್ವಿಕ ಅನುಮೋದನೆ ನೀಡಿದ್ದರು, ಅದಾದ ಮೇಲೆ ತಮಿಳುನಾಡನವರು ಖ್ಯಾತೆ ತೆಗೆದಿದ್ದರು. ನಾಲ್ಕು ರಾಜ್ಯಗಳ ನಿಲುವು ತೆಗೆದುಕೊಂಡು ಅಂತಿಮ ತೀರ್ಪು ಬರಲಿದೆ. ಅದು ಏನು ಬರುತ್ತೆ ಅನ್ನೋದು ಕಾಯ್ದು ನೋಡಿ ಮುಂದಿನ ಕಾರ್ಯಯೋಜನೆ ರೂಪಿಸಬೇಕು. ಕೊರೊನಾ ಸಂದರ್ಭದಲ್ಲಿ ಹೋರಾಟ ಎಷ್ಟು ಯಶಸ್ವಿಯಾಗುತ್ತೋ ಗೊತ್ತಿಲ್ಲ. ಈ ಹೋರಾಟದ ಹೆಸರಿನಲ್ಲಿ ಕಾಂಗ್ರೆಸ್ ತನ್ನ ಕಳೆದೊಗಿರುವ ವರ್ಚಸ್ಸು ಮರಳಿ ಪಡೆಯುವದಕ್ಕೆ ಪ್ರಯತ್ನ ಮಾಡ್ತಿದ್ರೆ ಕಾಂಗ್ರೆಸನ್ನು ಮುಗಿಸಬೇಕು ಅಂತಾ ಬಿಜೆಪಿಯವರು ನಿಂತಿದ್ದಾರೆ ಎಂದರು.
ಸಿದ್ದರಾಮಯ್ಯಗೆ ದೇವೆಗೌಡ ಪ್ರಶ್ನೆ :
ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿದ್ದಾಗ ಏನ್ ಆಯ್ತು?, ನಾವು ಬಿಜೆಪಿಯ ಬಿ ಟೀಮ್ ಅಂತಾ ಆರು ತಿಂಗಳ ಕಾಲ ಹೇಳಿದ್ರು. ಪರಿಣಾಮ 130 ಕ್ಕಿದ್ದ ಕಾಂಗ್ರೆಸ್ 78 ಕ್ಕೆ ಬಂತು ನಿಂತಿದೆ. ಇವರ ಹೋರಾಟದಿಂದ ಫಲ ಸಿಗುತ್ತೆ ಅಂದ್ರೆ ಅದು ಅಷ್ಟು ಸುಲಭವಲ್ಲ, ಜೆಡಿಎಸ್ ಗೂ ಶೇ. 20 ರಷ್ಟು ಮತಗಳು ಇವೆ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.
