ಪ್ರಧಾನಿ ಮೋದಿ 2 ಕೋಟಿ ಉದ್ಯೋಗದ ಭರವಸೆ ನೀಡಿ 8 ವರ್ಷವಾಯಿತು; ಓವೈಸಿ ವಾಗ್ದಾಳಿ

ಅಹಮದಾಬಾದ್: ದೇಶದ ನಿರೊದ್ಯೋಗದ ಸಮಸ್ಯೆ ಬಗ್ಗೆ ಗುಜರಾತ್ನಲ್ಲಿ ಟೀಕಾ ಪ್ರಹಾರ ನಡೆಸಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ , 8 ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದರು.
ಆ ಭರವಸೆ ಏನಾಯಿತು? ದೇಶದಲ್ಲಿ ಸರ್ಕಾರಿ ಉದ್ಯೋಗಳನ್ನು ನೀಡುವುದಾಗಿ ಇನ್ನೂ ಜನರನ್ನು ನಂಬಿಸುತ್ತಲೇ ಇದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ಮೋದಿ ಅವರು 2014ರಲ್ಲಿ 2 ಕೋಟಿ ಉದ್ಯೋಗಗಳನ್ನು ನೀಡುವುದಾಗಿ ಭರವಸೆ ನೀಡಿದ್ದರು. ಅದಾಗಿ 8 ವರ್ಷಗಳಾಗಿವೆ. ಈಗ ಅವರು 2024ರವರೆಗೆ 10 ಲಕ್ಷ ಉದ್ಯೋಗಗಳನ್ನು ನೀಡುವುದಾಗಿ ಹೇಳುತ್ತಿದ್ದಾರೆ. ಇದುವರೆಗೆ 16 ಕೋಟಿ ಉದ್ಯೋಗಗಳನ್ನು ನೀಡಬೇಕಾಗಿತ್ತು. ಆದರೆ, ಈಗ ಅವರು ಅದನ್ನು 10 ಲಕ್ಷ ಉದ್ಯೋಗಗಳಿಗೆ ಇಳಿಸಿದ್ದಾರೆ ಎಂದು ಓವೈಸಿ ಟೀಕಿಸಿದ್ದಾರೆ.
ನಾನು ಮದುವೆಯಾಗಲು ಬಯಸುವ ಹುಡುಗನ ಬಳಿ ಹುಡುಗಿಯೊಬ್ಬಳು “ನಿಮಗೆ ಸರ್ಕಾರಿ ಕೆಲಸ ಯಾವಾಗ ಸಿಗುತ್ತದೆ? ನನ್ನ ತಂದೆ ನನಗೆ ವರನನ್ನು ಹುಡುಕುತ್ತಿದ್ದಾರೆ” ಎಂದು ಯುವಕನ ಬಳಿ ಹೇಳಿದ್ದಳು. ಅದಕ್ಕೆ ನಾನು ನೀವಿಬ್ಬರೂ ಸುಮ್ಮನೆ ಮೋದಿಯ ಮಾತು ನಂಬಿ ಕುಳಿತುಕೊಳ್ಳಬೇಡಿ. ಬೇಗ ಮದುವೆಯಾಗಿಬಿಡಿ ಎಂದು ಹೇಳಿದ್ದಾಗಿ ಓವೈಸಿ ತಮಾಷೆಯಾಗಿ ಹಿಂದಿನ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ.
