ಈಶ್ವರಪ್ಪ ರಾಜಿನಾಮೆ ಅಲ್ಲ, ಸಂಪುಟದಿಂದ ವಜಾಗೊಳಿಸಬೇಕು: ಶಿವಕುಮಾರ್
ಬೆಂಗಳೂರು: ನಾವು ಈಶ್ವರಪ್ಪ ಅವರಿಂದ ರಾಜೀನಾಮೆ ಪಡೆಯಿರಿ ಎಂದು ಸರ್ಕಾರಕ್ಕೆ ಕೇಳುತ್ತಿಲ್ಲ. ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂಬುದು ಕಾಂಗ್ರೆಸ್ ಆಗ್ರಹ. ಮುಖ್ಯಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸುವಾಗ ಏನೆಂದು ಪ್ರಮಾಣ ಮಾಡಿದ್ದರು? ಸಂವಿಧಾನ ಕಾಪಾಡುತ್ತೇನೆ, ದೇಶದ ಗೌರವ ಕಾಪಾಡುತ್ತೇನೆ ಎಂದಿದ್ದಾರೆ. ಹೀಗಾಗಿ ಸಿಎಂ ಮತ್ತು ರಾಜ್ಯಪಾಲರು ಈಗ ಆ ಕೆಲಸ ಮಾಡಬೇಕಲ್ಲವೇ? ಇದು ಕೇವಲ ಈಶ್ವರಪ್ಪನ ವಿಚಾರ ಅಲ್ಲ. ರಾಷ್ಟ್ರಧ್ವಜ ಗೌರವದ ಪ್ರಶ್ನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದ ಆವರಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸೌಧದಲ್ಲಿ ಅಹೋರಾತ್ರಿ ನಡೆಸಿದ ಧರಣಿ ನಮ್ಮ ಹಾಗೂ ಬಿಜೆಪಿ ನಡುವಣ ವೈಯಕ್ತಿಕ ಹೋರಾಟ ಅಲ್ಲ. ಈಶ್ವರಪ್ಪ ಅವರು ನನ್ನ ತಂದೆಯನ್ನು ಎಳೆದು ತಂದಿದ್ದಾರೆ. ಅದು ವೈಯಕ್ತಿಕ ವಿಚಾರವಾದರೂ ನಾನು ಆ ಬಗ್ಗೆ ಮಾತನಾಡುತ್ತಿಲ್ಲ. ಇದು ದೇಶದ ಸ್ವಾತಂತ್ರ್ಯ, ಸಂವಿಧಾನ, ರಾಷ್ಟ್ರಧ್ವಜಕ್ಕೆ ಸಂಬಂಧಿಸಿದ ವಿಚಾರ. ದೇಶದ ಗೌರವ ಹಾಗೂ 135 ಕೋಟಿ ಭಾರತೀಯರ ಸ್ವಾಭಿಮಾನದ ಪ್ರಶ್ನೆ ಎಂದರು.
ರಾಷ್ಟ್ರಧ್ವಜ ಹಾರುವಾಗ ನಮ್ಮೆಲ್ಲರ ಮೈ ರೋಮಾಂಚನವಾಗುತ್ತದೆ. ಅಂತಹ ಧ್ವಜ ತೆಗೆದುಹಾಕಿ, ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಹೇಳಿದರೆ ನೋಡಿಕೊಂಡು, ಕೇಳಿಕೊಂಡು ಸುಮ್ಮನೆ ಕೂರಲು ಸಾಧ್ಯವೇ? ಎಂದು ಅವರು ಪ್ರಶ್ನಿಸಿದರು.
ಸರ್ಮರ್ಥಿಸಿದರೆ ಸಿಎಂ ಕೂಡ ಹೊಣೆ
ದೇಶಕ್ಕೆ ರಾಷ್ಟ್ರಧ್ವಜ, ಸ್ವಾತಂತ್ರ್ಯ ತಂದುಕೊಟ್ಟವರು ಕಾಂಗ್ರೆಸಿಗರು. ಹೀಗಾಗಿ ನಾವು ಈ ವಿಚಾರವಾಗಿ ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದ ಶಿವಕುಮಾರ್, ಈ ವಿಚಾರದಲ್ಲಿ ಸಿಎಂ ಸಮರ್ಥನೆಗೆ ಮುಂದಾದರೆ ಅವರೂ ಕೂಡ ಇದಕ್ಕೆ ಹೊಣೆಯಾಗುತ್ತಾರೆ. ಅಲ್ಲದೆ ತಮ್ಮ ಸ್ಥಾನಕ್ಕೆ ಅಗೌರವ ತರುತ್ತಿದ್ದಾರೆ.
ಜೆಡಿಎಸ್ ಹೋರಾಡಲಿ, ಬೇಡ ಎಂದವರು ಯಾರು?
ನೆರೆ, ರೈತರಿಗೆ ಸಮಸ್ಯೆ ಆದಾಗ ಕಾಂಗ್ರೆಸ್ ಅಹೋರಾತ್ರಿ ಧರಣಿ ಮಾಡಲಿಲ್ಲ. ಆದರೆ ಬೇರೆ ವಿಚಾರವಾಗಿ ಧರಣಿ ಮಾಡುತ್ತಿದ್ದಾರೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ, ಶಿವಕುಮಾರ್ ‘ನಾವು ಮಾಡಲಿಲ್ಲ ಎಂದಾದರೆ ಅವರು ಬಂದು ಮಾಡಲಿ. ಇಷ್ಟು ದಿನ ಯಾವ ಸುದ್ದಿಯನ್ನೂ ಎತ್ತದ ಅವರು ಈಗ ಬಂದು ಸರ್ಕಾರದ ವೈಫಲ್ಯಗಳ ಬಗ್ಗೆ ಹೋರಾಟ ಮಾಡಲಿ. ನಾವು ಬೆಳಗಾವಿ ಅಧಿವೇಶನದಲ್ಲಿ ಹೋರಾಟ ಮಾಡಿಲ್ಲವೇ? ಅವರದ್ದು ರಾಜಕೀಯ ಪಕ್ಷವಾಗಿದ್ದು, ಅವರ ಸಿದ್ಧಾಂತದ ಆಧಾರದ ಮೇಲೆ ಬಂದು ಹೋರಾಟ ಮಾಡಲಿ, ಬೇಡ ಎಂದವರು ಯಾರು?’ ಎಂದು ಹೇಳಿದರು.
