ಹೊಸ ಸಿಎಂ ಘೋಷಣೆಗೆ ಬಿಜೆಪಿ ತಡವರಿಸುತ್ತಿದೆಯೇ?

ಕಿರುಗುಂದ ರಫೀಕ್
ಚಿಕ್ಕಮಗಳೂರು: ವ್ಯವಸ್ಥಿತ ಕಾರ್ಯತಂತ್ರದಿಂದ ಯಡಿಯೂರಪ್ಪ ಅವರಿಂದ ರಾಜೀನಾಮೆ ಕೊಡಿಸಿ ಸಿಎಂ ಸ್ಥಾನದಿಂದ ಬಿಜೆಪಿ ಕೆಳಗಿಳಿಸಿಯಾಗಿದೆ. ಈಗ ಮುಂದೇನು ಮಾಡೋದು ಎನ್ನುವಂತೆ ಬಿಜೆಪಿ ವರಿಷ್ಠರು ನಟಿಸತೊಡಗಿದ್ದಾರೆ. ಬಿಜೆಪಿಯ ಈ ನಿಗೂಢ ನಡೆಯಿಂದ ರಾಜ್ಯದ ಜನರು ಕನ್ ಫ್ಯೂಸ್ ಆಗಿದ್ದಾರೆ!
ಈಗಾಗಲೇ ವಿವಿಧ ಮೂಲಗಳು, ಮಾಧ್ಯಮಗಳ ಪ್ರಕಾರ ನಾಲ್ಕಾರು ಹೆಸರುಗಳು ಸಿಎಂ ಕುರ್ಚಿ ಸುತ್ತ ತಳುಕು ಹಾಕಿರುವುದು ಗಮನಾರ್ಹ. ಆದರೆ ಮುಂದಿನ ಸಿಎಂ ಯಾರೆಂದು ಹೇಳದೆ ಗುಟ್ಟಾಗಿಯೇ ಆಯ್ಕೆ ಮಾಡಿದ್ದಾರೆ. ಈ ಲೆಕ್ಕಾಚಾರ ನಡೆದ ಮೇಲೆಯೇ ಯಡಿಯೂರಪ್ಪ ಅವರಿಂದ ರಾಜೀನಾಮೆ ಕೊಡಿಸುವ ಪ್ರಕ್ರಿಯೆ ನಡೆದಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ತಮ್ಮ ವ್ಯವಸ್ಥಿತ ಕಾರ್ಯತಂತ್ರ ಕೊನೆಯವರೆಗೂ ಯಶಸ್ವಿಯಾಗಬೇಕಲ್ಲವೇ? ಹೀಗಾಗಿ ಆ ಪ್ರಕ್ರಿಯೆಯಲ್ಲಿ ತಡವರಿಸಿದಂತೆ, ಸಿಎಂ ಸ್ಥಾನಕ್ಕೆ ಇನ್ನಷ್ಟೇ ಆಯ್ಕೆ ಮಾಡುತ್ತಿರುವಂತೆ ನಟಿಸುತ್ತಿರುವುದು ಸ್ಪಷ್ಟವಾಗಿ ಗೋಚರವಾಗಿದೆ.
ಹೀಗಿಲ್ಲವೆಂದಾದರೆ, ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಬಿಜೆಪಿಗೆ ಬಲವಾದ ಕಾರಣವಾದರೂ ಏನಿತ್ತು? ವಯಸ್ಸಿನ ಕಾರಣಕ್ಕೆ ರಾಜೀನಾಮೆ ಕೊಡಿಸಿದ್ದಾರೆ ಎನ್ನಲಾಗುತ್ತಿದೆ. ಕೇವಲ ಇನ್ನೆರಡು ವರ್ಷ ಪೂರ್ಣಗೊಳಿಸಲು ಯಡಿಯೂರಪ್ಪ ಅವರ ವಯಸ್ಸು ಅಡ್ಡಿಯಾಗುತ್ತದೆ ಎಂಬುದು ಹಾಸ್ಯಾಸ್ಪದವಾಗುತ್ತದೆ.
ಎರಡು ವರ್ಷದ ಸಂಭ್ರಮೋತ್ಸವ ಆಚರಿಸುವ ದಿನದಂದೇ ಯಡಿಯೂರಪ್ಪ ಕಣ್ಣೀರಿಟ್ಟು ರಾಜೀನಾಮೆ ಘೋಷಿಸಿದ್ದಾರೆ. ಇದು ವಿಪರ್ಯಾಸ. ಅದೇನು ಆನಂದಭಾಷ್ಪ ಎಂದುಕೊಳ್ಳಬೇಕೇ? ಪಕ್ಷಕ್ಕಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟು ದುಡಿದ ಹಿರಿಯ ನಾಯಕರಿಗೆ ಹೀಗೆ ಅವಮಾನ ಮಾಡುವುದು ಸರಿಯೇ ಎಂಬ ಪ್ರಶ್ನೆ ಉದ್ಭವಿಸಿದ್ದು, ಇದರಿಂದ ಯಡಿಯೂರಪ್ಪ ಬೆಂಬಲಿಗರ ಕೆಂಗಣ್ಣಿಗೆ ಬಿಜೆಪಿ ಹೈಕಮಾಂಡ್ ಗುರಿಯಾಗಿರುವುದಂತೂ ಸ್ಪಷ್ಟವಾಗಿದೆ.
ಒಟ್ಟಿನಲ್ಲಿ ಯಡಿಯೂರಪ್ಪ ಬೆಂಬಲಿಗ ಪಡೆಯ ವಿರೋಧ ಕಂಡು ಬೆರಗಾಗಿರುವ ಬಿಜೆಪಿ ಮುಂದಿನ ಕಾರ್ಯ ಸಾಧಿಸಲು ತಡವರಿಸತೊಡಗಿದೆ. ಈಗಾಗಲೇ ಮಠಾಧೀಶರ ಸಮಾವೇಶ, ಬೆಂಬಲಿಗರ ಪ್ರತಿಭಟನೆ ಕಂಡು ಬಿಜೆಪಿ ಬೆರಗಾಗಿದೆ. ಯಡಿಯೂರಪ್ಪ ಮತ್ತು ಅವರ ಬೆಂಬಲಿಗ ಪಡೆಯ ಮನವೊಲಿಸುವ ಕಾರ್ಯ ಮಾಡಿಕೊಂಡೇ ಹೆಜ್ಜೆಯಿಡಬೇಕಾದ ಅನಿವಾರ್ಯ ಬಿಜೆಪಿಗೆ ಎದುರಾಗಿದ್ದು, ಚಾಣಾಕ್ಯರಾದ ವರಿಷ್ಠರು ಅಂತಹ ಕಾರ್ಯದಲ್ಲಿ ಯಶಸ್ವಿಯಾಗುತ್ತಾರೋ ಎಂಬುದನ್ನು ಕಾದು ನೋಡಬೇಕಾಗಿದೆ.
