Breaking NewsLatestಮೆಟ್ರೋರಾಜಕೀಯರಾಜ್ಯಸುದ್ದಿ

ಕುತೂಹಲ ಕೆರಳಿಸಿದ ಸಿಎಂ ಇಬ್ರಾಹಿಂ, ಆರ್.ರೋಷನ್ ಬೇಗ್ ಭೇಟಿ

ಬೆಂಗಳೂರು: ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಒಂದು ಕಾಲು ಆಚೆ ಇಟ್ಟಿರುವ ಮಾಜಿ ಸಚಿವರಾದ ಸಿ.ಎಂ.ಇಬ್ರಾಹಿಂ ಹಾಗೂ ಆರ್.ರೋಷನ್ ಬೇಗ್ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಇಬ್ಬರು ಮುಖಂಡರ ಭೇಟಿ ಕುತೂಹಲಕ್ಕೆಡೆ ಮಾಡಿಕೊಟ್ಟಿದ್ದು ರಾಜಕೀಯವಾಗಿ ಗಮನ ಸೆಳೆದಿದೆ.

ಕಾಂಗ್ರೆಸ್ ಪಕ್ಷದ ಸಂಬಂಧ ಮುಗಿದ ಅಧ್ಯಾಯ ಎಂದಿರುವ ಸಿ.ಎಂ.ಇಬ್ರಾಹಿಂ ಭಾನುವಾರ ಶಾಸಕ ಎಂ.ಬಿ.ಪಾಟೀಲರನ್ನು ಭೇಟಿ ಮಾಡಿ ಅಲ್ಪಸಂಖ್ಯಾತ-ಲಿಂಗಾಯುತ) (ಅಲಿಂಗ) ಸಮಾವೇಶ ಕುರಿತು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಇಬ್ರಾಹಿಂ ರೋಷನ್ ಬೇಗ್ ಅವರನ್ನು ಭೇಟಿ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿ ಜೆಡಿಎಸ್ ನತ್ತ ಹೆಜ್ಜೆ ಹಾಕಲು ಇಬ್ರಾಹಿಂ ಸಿದ್ದರಾಗಿದ್ದಾರೆ. ಆದರೆ, ಈ ಬಗ್ಗೆ ಈವರೆಗೆ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಕೆಲವು ದಿನಗಳಲ್ಲಿ ತಮ್ಮ ರಾಜಕೀಯ ಭವಿಷ್ಯ ಕುರಿತು ನಿರ್ಧಾರ ಪ್ರಕಟಿಸುವುದಾಗಿ ಅವರು ತಿಳಿಸಿದ್ದಾರೆ.

ಜೆಡಿಎಸ್ ಗೆ ರೋಷನ್ ಬೇಗ್

ರೋಷನ್ ಬೇಗ್ ಅವರ ನಿವಾಸದಲ್ಲಿ ಇಬ್ರಾಹಿಂ ಭೇಟಿ ಮಾಡಿದ್ದು ಮಹತ್ವದ ರಾಜಕೀಯ ವಿಷಯಗಳ ಕುರಿತು ಹಾಗೂ ರಾಜಕೀಯ ಭವಿಷ್ಯದ ಕುರಿತು ಮಾತುಕತೆ ನಡೆಸಿದ್ದಾರೆ. ಸದ್ಯದಲ್ಲೇ ಇಬ್ಬರೂ ನಾಯಕರು ತಮ್ಮ ತೀರ್ಮಾನ ಪ್ರಕಟಿಸಲಿದ್ದಾರೆ ಎನ್ನಲಾಗಿದೆ.

ಐಎಂಎ ಹಗರಣದಲ್ಲಿ ಸಿಲುಕಿರುವ ರೋಷನ್ ಬೇಗ್ ತಮ್ಮ ಶಿವಾಜಿನಗರ ಕ್ಷೇತ್ರದ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಆದರೆ ಅಲ್ಲಿ ಅವರಿಗೆ ಕವಡೆಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ. ತಮ್ಮ ಮೇಲಿನ ಮೊಕದ್ದಮೆಯಿಂದ ಪಾರಾಗಲು ಅವರು ಬಿಜೆಪಿಯಲ್ಲಿ ರಾಜಕೀಯಾಶ್ರಯ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

2023ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಂದಿನ ರಾಜಕೀಯ ಭವಿಷ್ಯದ ಹಿನ್ನೆಲೆಯಲ್ಲಿ ಇಬ್ಬರೂ ನಾಯಕರ ಪರಸ್ಪರ ಭೇಟಿ ರಾಜಕೀಯವಾಗಿ ತೀವ್ರ ಮಹತ್ವಪಡೆದುಕೊಂಡಿದೆ.

Spread the love

Related Articles

Leave a Reply

Your email address will not be published. Required fields are marked *

Back to top button