Breaking NewsLatestಜಿಲ್ಲಾ ಸುದ್ದಿದಾವಣಗೆರೆ

ಸರ್ಕಾರಿ ಆಸ್ಪತ್ರೆಯಲ್ಲಿ ಶಿಶು ಕಳ್ಳತನ: ಆರೋಪಿ ಪತ್ತೆಗೆ ಸಂಘಟನೆಗಳಿಂದ 10 ದಿನದ ಗಡುವು!

ದಾವಣಗೆರೆ: ನಗರದ ಚಾಮರಾಜಪೇಟೆಯಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶು ಕಳವು ನಡೆದು 19 ದಿನ ಕಳೆದರೂ ಪತ್ತೆಯಾಗಿಲ್ಲ. ಇಲ್ಲಿಯವರೆಗೆ ಆರೋಪಿಗಳನ್ನು ಪತ್ತೆ ಹಚ್ಚಲಾಗಿಲ್ಲ. ಮುಂದಿನ ಹತ್ತು ದಿನಗಳೊಳಗಾಗಿ ಪ್ರಕರಣದಲ್ಲಿ ಭಾಗಿಯಾದವರನ್ನು ಬಂಧಿಸದಿದ್ದಲ್ಲಿ ನಿರಂತರ ಹೋರಾಟ ನಡೆಸಲಾಗುವುದು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಟಿ.ಅಸ್ಗರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.16 ರಂದು ಸಂಜೆ 6.18ಕ್ಕೆ ಹರಪನಹಳ್ಳಿ ಪಟ್ಟಣದ ಇಸ್ಮಾಯಿಲ್ ಜಬೀವುಲ್ಲಾ ಹಾಗೂ ಉಮೇಸಲ್ಮಾ ದಂಪತಿಗೆ ಗಂಡು ಶಿಶುವಿನ ಜನನವಾಗಿತ್ತು. ಮಗುವಿಗೆ ಉಸಿರಾಟದ ತೊಂದರೆ ಆಗಿತ್ತು ಎಂದು ಮಕ್ಕಳ ತೀವ್ರ ನಿಗಾಘಟಕದಲ್ಲಿಡಲಾಗಿತ್ತು. ಎರಡು ಗಂಟೆಯ ಬಳಿಕ ಶಿಶು ನೀಡುವಾಗ ತಾಯಿ ಕಾರ್ಡ್ ತರುವಂತೆ ತಿಳಿಸಲಾಗಿತ್ತು. ಅದರಂತೆ ಇಸ್ಮಾಯಿಲ್ ಅವರು ತಾಯಿ ಕಾರ್ಡ್ ತರಲು ಹೋದಾಗ ಅಪರಿಚಿತ ಮಹಿಳೆಗೆ ಮಗು ನೀಡಲಾಗಿತ್ತು. ಆದ್ರೆ ಮಹಿಳೆ ಮಗುವಿನ ಜೊತೆ ಪರಾರಿಯಾಗಿದ್ದಾಳೆ ಎಂದು ಆರೋಪಿಸಿದರು.

ಕೂಡಲೇ ಪೋಲೀಸರಿಗೆ ದೂರು ನೀಡಲು ತೆರಳಿದಾಗ ಎಂಟು ತಾಸು ವಿಳಂಬ ಮಾಡಲಾಯಿತು. ಶಿಶು ಕಳವು ಮಾಡಿದ ಅಪರಿಚಿತ ಮಹಿಳೆಯ ದೃಶ್ಯಾವಳಿಗಳು ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ ಸರಿಯಾಗಿ ಸಿಸಿ ಕ್ಯಾಮರ ಅಳವಡಿಸದ ಕಾರಣ ಮಗು ಅಪಹರಣ ಮಾಡಿದ ಮಹಿಳೆಯ ದೃಶ್ಯ ಸರಿಯಾಗಿ ಕಾಣುತ್ತಿಲ್ಲ. ಸ್ಮಾರ್ಟ್ ಸಿಟಿ ದಾವಣಗೆರೆಯಲ್ಲಿ ಸಿಸಿ ಕ್ಯಾಮರಾಗಳು ಕೆಲಸ ಮಾಡುತ್ತಿಲ್ಲ. ಶಿಶು ಕಳುವಾದ ಕೂಡಲೇ ದೂರು ದಾಖಲಿಸಿಕೊಂಡಿದ್ದರೆ ಅಪರಾಧಿಗಳು ಜೈಲು ಸೇರುತ್ತಿದ್ದರು. ಆದರೆ ಪೋಲಿಸರ ನಿರ್ಲಕ್ಷ್ಯದಿಂದ 19 ದಿನ ಕಳೆದರೂ ಮಗು ಪತ್ತೆಯಾಗಿಲ್ಲ. ನಮ್ಮ ನಿರಂತರ ಹೋರಾಟದಿಂದಾಗಿ ಜಾಗೃತರಾದ ಪೊಲೀಸರು ಕಳೆದೆರಡು ದಿನಗಳಿಂದ ಕಾರ್ಯ ಪ್ರವೃತ್ತರಾಗಿದ್ದಾರೆ. ಆರೋಪಿ ಪತ್ತೆಗೆ ಸಹಕರಿಸಿದರೆ 25 ಸಾವಿರ ರೂಪಾಯಿ ನೀಡುವುದಾಗಿ ಘೋಷಿಸಿದ್ದಾರೆ.

ಹತ್ತು ದಿನಗಳೊಳಗಾಗಿ ಮಗು ಪತ್ತೆ ಹಚ್ಚದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದರು. 19 ದಿನದಿಂದ ಹೋರಾಟ ಮಾಡುತ್ತಿದ್ದರೂ ಕೂಡ ಜನಪ್ರತಿನಿಧಿಗಳು ಸೌಜನ್ಯಕ್ಕಾದರೂ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button