ಪಾಕ್‌ಗೆ ವಿಶ್ವ ವೇದಿಕೆಯಲ್ಲೇ ಚಳಿ ಬಿಡಿಸಿದ ಭಾರತ!

ನೆರೆ ದೇಶ ಪಾಕಿಸ್ತಾನ ವಿಶ್ವಸಂಸ್ಥೆಯಲ್ಲಿ ಮತ್ತೆ ತನ್ನ ಮೊಂಡು ಬುದ್ದಿ ಪ್ರದರ್ಶಿಸಿದೆ. ಯುಎನ್ ಜನರಲ್ ಅಸೆಂಬ್ಲಿಯಲ್ಲಿ ವಸಾಹತುಶಾಹಿ, ವಿದೇಶಿ ಮತ್ತು ಬಾಹ್ಯ ಆಕ್ರಮಣಕ್ಕೆ ಒಳಗಾಗುವ ಜನರಿಗೆ ಹಕ್ಕು ನೀಡುವಂತಹ ಸೋ ಕಾಲ್ಡ್ ಮಸೂದೆಯೊಂದನ್ನ ಪರಿಚಯ ಮಾಡಿದೆ.
ಈ ವೇಳೆ ಪಾಲೇಸ್ತೇನ್ ಜೊತೆಗೆ ಕಾಶ್ಮೀರ ವಿಚಾರವನ್ನ ಪ್ರಸ್ತಾಪಿಸಿ ಭಾರತದ ಕೆಂಗಣ್ಣಿಗೆ ಗುರಿಯಾಗಿದೆ. ಇದ್ರ ಬೆನ್ನಲ್ಲೇ ಭಾರತ ಕೂಡ ಅದೇ ವೇದಿಕೆಯಲ್ಲಿ ಪಾಕ್‌ಗೆ ಹೀನಾಮಾನವಾಗಿ ತರಾಟೆಗೆ ತೆಗೆದುಕೊಂಡಿದೆ. ʻಪಾಕಿಸ್ತಾನ ಸುಳ್ಳು ಹೇಳಿಕೊಂಡು ಬೀದಿಸುತ್ತುವ ಹತಾಶ ಪ್ರಯತ್ನವನ್ನ ಮುಂದುವರೆಸಿದೆ. ಇಂತಹ ಕೆಟ್ಟ ಅಭ್ಯಾಸ ಈ ವೇದಿಕೆಯ ಪಾವಿತ್ರವನ್ನೇ ಹಾಳು ಮಾಡುತ್ತೆ. ಇಂತದ್ದನ್ನ ಎಲ್ಲರೂ ಸಾಮೂಹಿಕವಾಗಿ ಖಂಡಿಸಬೇಕು. ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಅದನ್ನ ಯಾರಿಂದಲೂ ಬೇರೆ ಮಾಡೋಕೆ ಸಾಧ್ಯವೇ ಇಲ್ಲ ಅಂತ ಭಾರತದ ರಾಯಭಾರ ಅಧಿಕಾರಿ ಪ್ರತೀಕ್ ಮಾತುರ್ ಹೇಳಿದ್ದಾರೆ.
ಇತ್ತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ಪಡೆಯೋ ವಿಚಾರವಾಗಿ ಭಾರತ ತನ್ನ ಪ್ರಯತ್ನವನ್ನ ತೀವ್ರಗೊಳಿಸಿದೆ. ಸಾಮಾನ್ಯ ಸಭೆಯಲ್ಲಿ G4 ದೇಶಗಳ ಪರ ಅಂದ್ರೆ ಜರ್ಮನಿ, ಬ್ರೆಜಿಲ್, ಜಪಾನ್ ಪರವಾಗಿ ಭಾರತ ಜಂಟಿ ಹೇಳಿಕೆ ನೀಡಿದೆ. ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಈ ಬಗ್ಗೆ ಮಾತನಾಡಿದ್ದು, ಈ ಕೂಡಲೇ ಭದ್ರತಾ ಮಂಡಳಿಗೆ ಸುಧಾರಣೆ ತಂದು ಈ ನಾಲ್ಕು ದೇಶಗಳನ್ನ ಅದರಲ್ಲಿ ಸೇರಿಸಿಕೊಳ್ಳಬೇಕು ಅಂತ ಆಗ್ರಹ ಮಾಡಿದ್ದಾರೆ. ಅಲ್ದೇ ಈ ಬಾರಿಯೇ ಇದು ನೆರವೇರುವ ವಿಶ್ವಾಸವಿದೆ ಅಂತ ಹೇಳಿದ್ದಾರೆ.
