
ನವದೆಹಲಿ: ಕೇಂದ್ರ ಮತ್ತು ರಾಜ್ಯಗಳ ಸರ್ಕಾರಿ ನೌಕರರ ತೆರಿಗೆ ಕಡಿತದ ಮಿತಿಯನ್ನು ಶೇ.10 ರಿಂದ 14ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ರಾಜ್ಯಗಳ ಸರ್ಕಾರಿ ನೌಕರರ ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ಕೇಂದ್ರ ಸರ್ಕಾರಿ ನೌಕರರಿಗೆ ಸರಿ ಸಮಾನಾಗಿ ತರಲು ಸಹಾಯ ಮಾಡುತ್ತದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲ ಸೀತಾರಾಮನ್ ತಿಳಿಸಿದ್ಧಾರೆ.
ಲೋಕಸಭೆಯಲ್ಲಿ 2022-23 ನೇ ಸಾಲಿನ ಬಜೆಟ್ ಮಂಡನೆ ವೇಳೆ ಈ ವಿಷಯ ಪ್ರಕಟಿಸಿದರು. ಪಾಲಿಶ್ ಮಾಡಿದ ವಜ್ರಗಳು, ರತ್ನಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ.5ಕ್ಕೆ ಇಳಿಸಲಾಗುವುದು ಎಂದು ಅವರು ಹೇಳಿದರು. ಜನವರಿಯಲ್ಲಿ ಒಟ್ಟು 1,40,986 ಕೋಟಿ ರೂಪಾಯಿ ಜಿಎಸ್ ಟಿ ತೆರಿಗೆ ಸಂಗ್ರಹವಾಗಿದೆ. ಇದು ಜಿಎಸ್ ಟಿ ಆರಂಭವಾದಾಗಿನಿಂದ ಅತಿ ಹೆಚ್ಚು ಎಂದು ಅವರು ಹೇಳಿದರು.
75 ಜಿಲ್ಲೆಗಳಲ್ಲಿ ಡಿಜಿಟಲ್ ಬ್ಯಾಂಕಿಂಗ್
ಭಾರತದ ಸ್ವಾತಂತ್ರ್ಯದ 75 ವರ್ಷಗಳನ್ನು ಗುರುತಿಸಲು ದೇಶಾದ್ಯಂತ 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದೂ ಅವರು ಪ್ರಕಟಿಸಿದರು. ಡಿಜಿಟಲ್ ಬ್ಯಾಂಕಿಂಗ್ ತನ್ನ ಪ್ರಯೋಜನಗಳನ್ನು ಗ್ರಾಹಕ ಸ್ನೇಹಿಯಾಗಿ ದೇಶದ ಮೂಲೆ, ಮೂಲೆಗಳಿಗೆ ಕೊಂಡೊಯ್ಯಲಿದೆ ಎಂದು ಅವರು ತಿಳಿಸಿದರು.
ಸಹಕಾರಿ ಶುಲ್ಕ ಕಡಿತ
ಆರ್ಥಿಕ ಮತ್ತು ಬಳಕೆದಾರ ಸ್ನೇಹಿಯಾಗಿರುವ ಪಾವತಿ ಪ್ಲಾಟ್ ಫಾರ್ಮ್ ಗಳ ಬಳಕೆಯನ್ನು ಉತ್ತೇಜಿಸಲು ಸಹ ಗಮನಹಿರಿಸಲಾಗುವುದು ಎಂದೂ ನಿರ್ಮಲ ಸೀತಾರಾಮನ್ ತಿಳಿಸಿದರು.ಸಹಕಾರಿ ಕ್ಷೇತ್ರದ ಹೆಚ್ಚುವರಿ ಶುಲ್ಕವನ್ನು ಶೇ.12 ರಿಂದ ಶೇ.7ಕ್ಕೆ ಇಳಿಸಲಾಗುವುದು ಎಂದೂ ಅವರು ಹೇಳಿದರು.
