ಕಾಲೇಜು ಕ್ಯಾಂಪಿಸ್ಸಿನಲ್ಲಿ ಹಾರಿಸಿದ್ದ ಕೇಸರಿ ಧ್ವಜ ತೆಗೆದುಹಾಕಲಾಗಿದೆ: ಶಿವಮೊಗ್ಗ ಎಸ್ಪಿ ಸ್ಪಷ್ಟನೆ

ಶಿವಮೊಗ್ಗ: ಹಿಜಾಬ್-ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಇಲ್ಲಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ರಾಷ್ಟ್ರಧ್ವಜವನ್ನು ಕೆಳಗಿಳಿಸಿ ಕೇಸರಿ ಧ್ವಜ ಹಾರಿಸಿದ್ದಾರೆ ಎಂಬ ವದಂತಿಯನ್ನು ಪೊಲೀಸರು ತಳ್ಳಿಹಾಕಿದ್ದಾರೆ. ಈ ಕುರಿತು ಸ್ಪಷ್ಟನೆ ನೀಡಿರುವ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಿಪ್ರಸಾದ್ ಕಾಲೇಜಿನ ಖಾಲಿ ಕಂಬದ ತುದಿಗೆ ಕೇಸರಿ ಧ್ವಜ ಹಾರಿಸಲಾಗಿತ್ತು. ನಂತರ ಅದನ್ನು ತೆಗೆದುಹಾಕಲಾಯಿತು. ಆದರೆ ರಾಷ್ಟ್ರಧ್ವಜ ಕೆಳಗಿಳಿಸಿ ಕೇಸರಿಧ್ವಜ ಹಾರಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ನಡುವೆ, ಬುಧವಾರ ಕಾಲೇಜಿನಲ್ಲಿ ರಾಷ್ಟ್ರಧ್ವಜವನ್ನು ಕೆಳಗಿಳಿಸಿ ಕೇಸರಿ ಧ್ವಜ ಹಾರಿಸಲಾಗಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪದ ವಿರುದ್ಧ ಬಿಜೆಪಿ ಕಿಡಿಕಾರಿದೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, “ತಿರಂಗ ಧ್ವಜ ನಮ್ಮ ಹೆಮ್ಮೆ. ತಿರಂಗ ಧ್ವಜವನ್ನೂ ರಾಜಕಾರಣಕ್ಕೆ ಬಳಸಿಕೊಂಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬೇಷರತ್ತಾಗಿ ರಾಷ್ಟ್ರದ ಕ್ಷಮೆ ಕೇಳಬೇಕು. ಸಾಕ್ಷಾಧಾರ ಇಲ್ಲದೇ ಗಾಳಿಯಲ್ಲಿ ಗುಂಡು ಹೊಡೆದ ಡಿಕೆಶಿ ಅವರ ಉದ್ದೇಶ ಸಮಾಜದ ಶಾಂತಿ ಕದಡುವುದಾಗಿತ್ತು” ಎಂದು ಆರೋಪಿಸಿದೆ.
ಇನ್ನೊಂದು ಟ್ವೀಟ್ ನಲ್ಲಿ ಡಿಕೆಶಿ ಮಾಡಿದ ಸುಳ್ಳು ಆರೋಪದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ. ರಾಷ್ಟ್ರ ವಿರೋಧಿಗಳಿಗೆ ಪ್ರೇರಣೆ ನೀಡುವುದಕ್ಕಾಗಿ ಕಾಂಗ್ರೆಸ್ ಷಡ್ಯಂತ್ರ ಪ್ರಾಯೋಜಿಸುತ್ತಿದೆ. ಕಾಂಗ್ರೆಸ್ ಸಂಚು ದೇಶಕ್ಕೆ ಮಾರಕ ಎಂದು ವಾಗ್ದಾಳಿ ನಡೆಸಿದೆ. “ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ್ದಾರೆಂದು ಮೊಸಳೆ ಕಣ್ಣೀರು ಹರಿಸಿದ @DKShivakumar ಅವರೇ, ನೀವು ಯಾವ “ಟೂಲ್ ಕಿಟ್” ಸೂತ್ರಧಾರರು? ಸೂಕ್ಷ್ಮ ಸಂದರ್ಭದಲ್ಲಿ ಸುಳ್ಳು ಸುದ್ದಿ ಹಬ್ಬಿಸಬಾರದೆಂಬ ಕನಿಷ್ಠ ಜ್ಞಾನ ಕೂಡಾ ನಿಮಗಿಲ್ಲವೇ?” ಎಂದು ಪ್ರಶ್ನಿಸಿದೆ. ಬುಧವಾರ ಈ ಕಾಲೇಜಿನಲ್ಲಿ ಹಿಜಾಬ್ ವಿರುದ್ಧದ ಪ್ರತಿಭಟನೆ ವೇಳೆ, ಯುವಕನೋರ್ವ ಕ್ಯಾಂಪಿಸ್ಸಿನಲ್ಲಿದ್ದ ಪೋಲ್ ಮೇಲೆ ಹತ್ತಿ ಕೇಸರಿ ಧ್ವಜ ಹಾರಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
