ಮುಸ್ಲಿಂ ದೇವರಿಗೆ ಹಿಂದೂ ಗ್ರಾಮಸ್ಥರ ಪೂಜೆ: ಸಾಮರಸ್ಯಕ್ಕೆ ಸಾಕ್ಷಿಯಾಗಿದೆ ಈ ಗ್ರಾಮ!

ದಾವಣಗೆರೆ: ರಾಜ್ಯದಲ್ಲಿ ಕೋಮುಸಾಮರಸ್ಯ ಕದಡಿರುವ ಇಂಥ ವೇಳೆಯಲ್ಲಿ ಇಲ್ಲೊಂದು ಗ್ರಾಮ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ಮಾತ್ರವಲ್ಲದೆ ದೇಶಕ್ಕೆ ಮಾದರಿ ಎನ್ನುವಂತಿದೆ. ಕಾರಣ, ಇಲ್ಲಿ ಮುಸ್ಲಿಂರು ಯಾರೂ ಇಲ್ಲ. ಹಿಂದುಗಳೇ ಮುಸ್ಲಿಂ ದೇವರನ್ನ ಪೂಜೆ ಮಾಡಿ ತಮ್ಮ ಕಷ್ಟ ಕಾರ್ಪಣ್ಯಗಳನ್ನ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ.
ಮುಸ್ಲಿಂ ದರ್ಗಾಕ್ಕೆ ಹಿಂದೂಗಳು ಪೂಜೆ ಸಲ್ಲಿಸುವ ಮೂಲಕ ಭಾವೈಕ್ಯತೆಯ ತಾಣವಾಗಿ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ನಾಗೇನಹಳ್ಳಿ ಮಾರ್ಪಟ್ಟಿದೆ. ಇಂದು ಧರ್ಮ, ಜಾತಿಗಳ ನಡುವೆ ಕೋಮು ಸೌಹಾರ್ದತೆ ಬೆಳೆಯುವ ಬದಲಾಗಿ ಕೋಮು ದ್ವೇಷವೇ ಹೆಚ್ಚಾಗುತ್ತಿದೆ. ಅಂತಹದರಲ್ಲಿ ಈ ನಾಗೇನಹಳ್ಳಿ ದೇಶಕ್ಕೆ ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುವಂತಿದೆ.
ಕಾರಣ, ಈ ಗ್ರಾಮದಲ್ಲಿ ಹಿಂದೂಗಳು ಮಾತ್ರ ಇದ್ದಾರೆ. ಆದರೆ ಇಲ್ಲಿ ಜಮಾಲ್ ಎಂಬ ಮುಸ್ಲಿಂ ಮೌಲ್ವಿಯೊಬ್ಬನ ಸಮಾಧಿ ಇದ್ದು, ಆ ಸಮಾಧಿಯನ್ನ ಹಿಂದೂಗಳೇ ಹಿಂದೂ ಸಂಪ್ರದಾಯದಂತೆ ಪೂಜೆ ಮಾಡುತ್ತಿದ್ದಾರೆ. ಅಲ್ಲದೇ, ಆ ದರ್ಗಾ ಪಕ್ಕದಲ್ಲಿಯೇ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದು, ಅದಕ್ಕೆ ಗುಡಿ, ಗೋಪುರ ಕಟ್ಟಿಸಿ ಜಮಾಲ್ ಸ್ವಾಮಿ ಪ್ರಸನ್ನ ಎಂದು ಹೆಸರನ್ನು ಇಟ್ಟಿದ್ದಾರೆ.
ಹಲವು ಶತಮಾನಗಳ ಹಿಂದೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ನಾಗೇನಹಳ್ಳಿ ಗ್ರಾಮಕ್ಕೆ ಜಮಾಲ್ ಸಾಬ್ ಎಂಬ ಪವಾಡ ಪುರುಷನೊಬ್ಬ ಕೇರಳದಿಂದ ಆಗಮಿಸಿದ್ದ. ಬಹುವರ್ಷಗಳ ಕಾಲ ಇಲ್ಲಿಯೇ ತಂಗಿದ್ದ ಆ ಜಮಾಲ್ ಸಾಬ್ ಸ್ಥಳೀಯರಿಗೆ ಹಲವಾರು ಪವಾಡಗಳನ್ನು ಮಾಡಿ ತೋರಿಸಿದ್ದ. ಆನಾರೋಗ್ಯ ಪೀಡಿತ ಜನ ಮತ್ತು ಜಾನುವಾರುಗಳ ರೋಗ ರುಜಿನಗಳನ್ನು ತನ್ನ ಪವಾಡದಿಂದ ಹೋಗಲಾಡಿಸಿದ್ದ.

ಹೀಗಾಗಿ, ಅಂದಿನ ಜನರು ಜಮಾಲ್ ನನ್ನು ಸ್ವಾಮಿ ಎಂದೇ ನಂಬಿದ್ದರು. ಅಲ್ಲದೇ ಆತ ಕಾಲನಂತರ ಆತನ ಸಮಾಧಿಯನ್ನು ಅಂದಿನಿಂದ ಇಂದಿನವರೆಗೂ ಪೂಜೆ ಮಾಡುತ್ತಿದ್ದಾರೆ. ಇನ್ನೂ ಪ್ರತಿ ವರ್ಷ ಜಮಾಲ್ ಸ್ವಾಮಿ ಉರುಸ್ ಕೂಡ ನಡೆಯುತ್ತಿದ್ದು, ಅದನ್ನು ಸ್ಥಳೀಯ ಹಿಂದೂಗಳೇ ಆಚರಿಸುತ್ತಿದ್ದಾರೆ. ಇಲ್ಲಿಯ ಹಿಂದೂ ಜನರೇ ಆತನಿಗೆ ಪ್ರಸಾದ ಮತ್ತು ಮಾಂಸದೂಟ ಅರ್ಪಿಸುವ ಮೂಲಕ ಶ್ರದ್ಧಾ ಭಕ್ತಿಯಿಂದ ಉರುಸ್ ಕಾರ್ಯವನ್ನು ಅದ್ಧೂರಿಯಾಗಿ ನೆರವೇರಿಸುತ್ತಾರೆ. ಈ ಉರುಸ್ ನಲ್ಲಿ ಸುತ್ತಮುತ್ತಲಿನ ನೂರಾರು ಮುಸ್ಲಿಂ ಬಾಂಧವರೂ ಕೂಡ ಭಾಗವಹಿಸುತ್ತಾರೆ.
ಇನ್ನೂ ಜಮಾಲ್ ಹೆಸರಲ್ಲಿ ಈಗಲೂ ಹಲವಾರು ಪವಾಡಗಳು ನಡೆಯುತ್ತವೆಯಂತೆ. ಹೀಗಾಗಿ, ದಾವಣಗೆರೆ ಜಿಲ್ಲೆಯ ನಾನಾ ಭಾಗಗಳ ಹಿಂದೂ ಮುಸ್ಲಿಂ ಜನರು ಈ ಜಮಾಲ್ ಸ್ವಾಮಿ ಸನ್ನಿಧಿಗೆ ಬಂದು ಆರೋಗ್ಯ, ಕೌಟುಂಬಿಕ ಸಮಸ್ಯೆ, ವಿವಾಹ ಪ್ರಾಪ್ತಿ ಸೇರಿದಂತೆ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತುಕೊಳ್ಳುತ್ತಾರೆ. ಜಮಾಲ್ ಸ್ವಾಮಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಇಷ್ಟಾರ್ಥಗಳು ಸಿದ್ದಿಯಾಗುತ್ತವೆ ಎನ್ನುವುದು ಇಲ್ಲಿನ ಭಕ್ತರ ನಂಬಿಕೆ. ಹೀಗಾಗಿ, ಇದೀಗ ಜಮಾಲ್ ಸ್ವಾಮಿ ಶ್ರೀ ಕ್ಷೇತ್ರ ದಾವಣಗೆರೆ ಸೇರಿದಂತೆ ಸುತ್ತಲಿನ ಜಿಲ್ಲೆಗಳಲ್ಲಿ ಪ್ರಸಿದ್ಧಿ ಪಡೆದಿದೆ.
ಇಂದು ಧರ್ಮ, ಜಾತಿಗಳ ನಡುವೆ ಕೋಮು ಸೌಹಾರ್ದತೆ ಬೆಳೆಯುವ ಬದಲಾಗಿ ಕೋಮು ದ್ವೇಷ ಹೆಚ್ಚಿ ದೇಶದಲ್ಲಿ ಕೋಮು ಗಲಭೆಗಳು ಉಂಟಾಗುತ್ತಿವೆ. ಅಲ್ಲದೆ ಇಂದಿನ ರಾಜಕಾರಣಿಗಳು ತಮ್ಮ ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಆದರೆ ಈ ಗ್ರಾಮದಲ್ಲಿ ಹಿಂದೂಗಳು ಮಾತ್ರ ಇದ್ದು ದ್ವೇಷ, ಅಸೂಯೆ ತೋರದೆ ಮುಸ್ಲಿಂ ಧರ್ಮದ ದರ್ಗಕ್ಕೆ ಹೋಗಿ ಗ್ರಾಮದಲ್ಲಿ ಹಬ್ಬ ಮಾಡುತ್ತಾರೆ.
ನಾಗೇನಹಳ್ಳಿ ಗ್ರಾಮದಲ್ಲಿ ಹಿಂದೂಗಳೇ ಇದ್ದಾರೆ, ದರ್ಗಾವನ್ನು ನಿರ್ಮಾಣ ಮಾಡಿಸಿದವರು ಹಿಂದೂಗಳು. ಈ ಗ್ರಾಮದಲ್ಲಿ ಹೇಳಿಕೊಳ್ಳಲು ಒಂದು ಮುಸ್ಲಿಂ ಕುಟುಂಬ ಇಲ್ಲ. ಜಮಾಲ್ ಸ್ವಾಮಿ ಬಂದು ಇಲ್ಲಿ ಪವಾಡ ಮಾಡಿದ್ದರಿಂದ ಹಿಂದೂಗಳು ಇಲ್ಲಿ ಪ್ರತಿನಿತ್ಯ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಈ ಸನ್ನಿಧಿಯಲ್ಲಿ ಇಷ್ಟಾರ್ಥಗಳು ಸಿದ್ದಿಸುತ್ತವೆ ಎನ್ನುವುದು ಇಲ್ಲಿನ ಭಕ್ತರ ನಂಬಿಕೆಯಾಗಿದೆ.
