Breaking NewsLatestಜಿಲ್ಲಾ ಸುದ್ದಿಮೆಟ್ರೋರಾಜಕೀಯರಾಜ್ಯಸುದ್ದಿ

ಹಿಜಾಬ್: ವಿದ್ಯಾರ್ಥಿನಿಯರ ಮೇಲೆ ಕೇಸು, ಭುಗಿಲೆದ್ದ ಸಿಂಧೂರ ವಿವಾದ, ಉಪನ್ಯಾಸಕಿ ರಾಜಿನಾಮೆ…

ಬೆಂಗಳೂರು: ರಾಜ್ಯ ಹೈಕೋರ್ಟ್ ವಿಸ್ತೃತಪೀಠದಲ್ಲಿ ಹಿಜಾಬ್ ಪ್ರಕರಣ ಕುರಿತು ವಿಚಾರಣೆ ಮುಂದುವರಿದಿರುವಾಗಲೇ, ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯದ ವಿವಿಧೆಡೆ ವಿದ್ಯಾರ್ಥಿನಿಯರು, ಪೋಷಕರು, ಶಿಕ್ಷಕರ ಪ್ರತಿರೋಧ ಮುಂದುವರಿದಿದೆ. ಹೈಕೋರ್ಟ್ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಶುಕ್ರವಾರವೂ ರಾಜ್ಯದ ವಿವಿಧ ಕಾಲೇಜುಗಳಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಈ ಬಗ್ಗೆ ಕೆಲವು ಕಾಲೇಜುಗಳ ಆವರಣದಲ್ಲಿ ಎಂದಿನಂತೆ ಪ್ರತಿಭಟನೆ, ಘೋಷಣೆ, ತರಗತಿ ಬಹಿಷ್ಕಾರ, ಮಾತಿನ ಚಕಮಕಿ, ಆಕ್ರೋಶ ಮುಂದುವರಿದಿತ್ತು. ಶಿಕ್ಷಣಸಂಸ್ಥೆಗಳಿಗೆ ಪೊಲಿಸರು ಭದ್ರತೆ ಒದಗಿಸಿದ್ದರು. ಕೆಲವು ಕಡೆ ಪ್ರತಿಭಟನಾಕಾರರ ಮೇಲೆ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.

ಹಿಜಾಬ್ ನಂತರ ಸಿಂಧೂರ ವಿವಾದ

ಹಿಜಾಬ್-ಕೇಸರಿ ಶಾಲು ವಿವಾದದ ನಂತರ ಸಿಂಧೂರ ವಿವಾದವೂ ವಿಜಯಪುರದಲ್ಲಿ ಶುಕ್ರವಾರ ಭುಗಿಲೆದ್ದಿದೆ. ಇಂಡಿ ಪಟ್ಟಣದ ಸರ್ಕಾರಿ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿನಿಯೊಬ್ಬರು ಹಣೆಗೆ ಉದ್ದನೆ ಸಿಂಧೂರ ಹಚ್ಚಿಕೊಂಡ ಬಂದಿದ್ದರು. ಸಿಂಧೂರ ಅಳಿಸಿ ಕಾಲೇಜು ಪ್ರವೇಶಿಸುವಂತೆ ಉಪನ್ಯಾಸಕರು ತಾಕೀತು ಮಾಡಿದರು. ಒಪ್ಪದಿದ್ದಾಗ ಕಾಲೇಜು ಪ್ರವೇಶ ನಿರಾಕರಿಸಲಾಗಿದೆ. ಈ ಸಂಬಂಧ ಕೆಲವು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ನಡುವೆ ಮಾತಿನ ಜಟಾಪಟಿ ನಡೆದಿದೆ.

ಪ್ರಮೋದ್ ಮುತಾಲಿಕ್ ಎಚ್ಚರಿಕೆ

ಸಿಂಧೂರ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿನಿಯನ್ನು ತಡೆದ ಅಧ್ಯಾಪಕನನ್ನು ಅಮಾನತ್ತು ಮಾಡುವಂತೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸರ್ಕಾರವನ್ನು ಆಗ್ರಹಿಸಿದ್ದಾರೆ. ಕೆಲವು ಕಾಲೇಜುಗಳಲ್ಲಿ ಹಣೆಗೆ ಕುಂಕುಮ, ವಿಭೂತಿ, ಗಂಧ ಹಾಕಿದವರನ್ನು ತಡೆಯುತ್ತಿದ್ದಾರೆ ಎಂದು ದೂರಿದರು. ಕ್ರಮ ಜರುಗಿಸದಿದ್ದರೆ ರಾಜ್ಯಾದ್ಯಂತ ಎಲ್ಲರೂ ಕುಂಕುಮ, ವಿಭೂತಿ ಹಚ್ಚಿ ಅಭಿಯಾನ ನಡೆಸಬೇಕಾದೀತು ಎಂದು ಎಚ್ಚರಿಸಿದ್ದಾರೆ.

ಅತಿಥಿ ಉಪನ್ಯಾಸಕಿ ರಾಜಿನಾಮೆ

ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಅತಿಥಿ ಉಪನ್ಯಾಸಕಿಯೊಬ್ಬರು ರಾಜಿನಾಮೆ ನೀಡಿದ್ದಾರೆ. ತುಮಕೂರಿನ ಜೈನ್ ಪಿಯು ಕಾಲೇಜಿನ ಚಾಂದಿನಿ ನಾಜ್ ಹೆಸರಿನ ಅತಿಥಿ ಅಧ್ಯಾಪಕಿಗೆ ಹಿಜಾಬ್ ಧರಿಸಿ ಮಕ್ಕಳಿಗೆ ಪಾಠ ಮಾಡದಂತೆ ಪ್ರಾಂಶುಪಾಲರು ತಡೆದದ್ದು ಇದಕ್ಕೆ ಕಾರಣ.

ಕಳೆದ ಮೂರು ವರ್ಷಗಳಿಂದ ಈ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಈವರೆಗೆ ಯಾವುದೇ ತೊಂದರೆಯಾಗಿರಲಿಲ್ಲ. ಆದರೆ ಪ್ರಾಂಶುಪಾಲರು ಹಿಜಾಬ್ ಧರಿಸಿ ಪಾಠ ಮಾಡಲು ಅವಕಾಶ ನೀಡಲಿಲ್ಲ . ಹಿಜಾಬ್ ತೆಗೆಯಿರಿ ಎನ್ನುವ ಮೂಲಕ ನನ್ನ ಆತ್ಮಗೌರವಕ್ಕೆ ಧಕ್ಕೆ ತಂದಿದೆ ಎಂದು ಉಪನ್ಯಾಸಕಿ ದೂರಿದರು.

ವಿದ್ಯಾರ್ಥಿನಿಯರ ಮೇಲೆ ಕೇಸು

ಶಿವಮೊಗ್ಗ, ಬಳ್ಳಾರಿ ಜಿಲ್ಲೆಗಳಲ್ಲಿ ಹಿಜಾಬ್ ವಿರುದ್ಧ ವಿದ್ಯಾರ್ಥಿನಿಯರೂ ಶುಕ್ರವಾರವೂ ಪ್ರತಿಭಟಿಸಿದರು. ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 144 ಉಲ್ಲಂಘನೆ ಆರೋಪದಡಿ 10ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಮೇಲೆ ಪೊಲೀಸರು ಕೇಸು ದಾಖಲಿಸಿದ್ದಾರೆ.

ಎಜಿಎಂ ಕಾಲೇಜಿನಲ್ಲಿ 10 ದಿನಗಳ ನಂತರ ತರಗತಿ

ಕಳೆದ ಫೆ.8 ರಂದು ಹಿಜಾಬ್-ಕೇಸರಿ ಶಾಲು ವಿವಾದದ ಕಿಡಿ ಹತ್ತಿದ ಉಡುಪಿಯ ಎಜಿಎಂ ಕಾಲೇಜಿನಲ್ಲಿ ಹತ್ತು ದಿನಗಳ ನಂತರ ಶುಕ್ರವಾರ ತರಗತಿಗಳು ಆರಂಭವಾದವು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು. ಹೊರಗಿನವರನ್ನು ಕಾಲೇಜು ಆವರಣ ಪ್ರವೇಶ ನಿರ್ಬಂಧಿಸಲಾಗಿತ್ತು.

ಮೈಗ್ರಿಸ್ ಕಾಲೇಜಿನಲ್ಲೂ ಕಿಚ್ಚು

ಆದರೆ ಉಡುಪಿಯ ಕಲ್ಯಾಣಪುರದಲ್ಲಿರುವ ಮೈಗ್ರಿಸ್ ಕಾಲೇಜಿಗೆ ಶುಕ್ರವಾರ ವಿವಾದದ ಕಿಚ್ಚು ಹಬ್ಬಿತು. ಕಾಲೇಜಿನಲ್ಲಿ ಯಾರೂ ಧಾರ್ಮಿಕ ವಸ್ತ್ರಗಳನ್ನು ಧರಿಸಿ ತರಗತಿ ಪ್ರವೇಶಿಸಬಾರದು ಎಂಬ ಹೈಕೋರ್ಟ್ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಇಲ್ಲದ ಹೊಸ ನಿಮಯಗಳನ್ನು ಕಾಲೇಜಿನಲ್ಲಿ ಪಿಯು, ಪದವಿ ಮತ್ತು ಪಿಜಿ ವಿದ್ಯಾರ್ಥಿಗಳಿಗೂ ಅನ್ವಯಿಸಿ ಜಾರಿಗೊಳಿಸಲಾಗಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳ ಗುಂಪು ತರಗತಿ ಬಹಿಷ್ಕರಿಸಿ ಕಾಲೇಜು ಎದುರು ಪ್ರತಿಭಟನೆ ನಡೆಸಿತು.

ಪಿಯು ಮಂಡಳಿ ನಿರ್ದೇಶಕರಿಗೆ ಮನವಿ

ಈ ನಡುವೆ, ರಾಜ್ಯದ ವಿವಿಧ ಕಾಲೇಜುಗಳಲ್ಲಿ ಹೈಕೋರ್ಟ್ ಮಧ್ಯಂತರ ಆದೇಶದ ನೆಪದಲ್ಲಿ ಡ್ರೆಸ್ ಕೋಡ್ ಜಾರಿಯಲ್ಲಿ ಇಲ್ಲದ ಕಾಲೇಜುಗಳಲ್ಲೂ ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶಕ್ಕೆ ಅವಕಾಶ ನೀಡದೇ ಹಿಂತಿರುಗುವಂತೆ ಮಾಡಲಾಗಿದೆ. ಈ ಕುರಿತು ಪರಿಶೀಲನೆ ನಡೆಸುವಂತೆ ಪಿಯುಸಿಎಲ್-ಕೆ, ಬಹುತ್ವ ಕರ್ನಾಟಕ ಸೇರಿದಂತೆ ವಿವಿಧ ಪ್ರಗತಿಪರ ಮತ್ತು ಮಾನವಹಕ್ಕು ಸಂಘಟನೆಗಳ ನಿಯೋಗ ಪಿಯು ಮಂಡಳಿ ನಿರ್ದೇಶಕರಿಗೆ ಮನವಿ ಸಲ್ಲಿಸಿದೆ.

ಸುರೇಶ್ ಕುಮಾರ್ ಸರ್ಕಾರಕ್ಕೆ ಪತ್ರ

ಈ ನಡುವೆ ಸರ್ಕಾರಕ್ಕೆ ಪತ್ರ ಬರೆದಿರುವ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್, ಹಿಜಾಬ್-ಸಮವಸ್ತ್ರ ಸಂಘರ್ಷದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಕಾಯುವ ಕೆಲಸಕ್ಕೆ ಶಿಕ್ಷಣ ಇಲಾಖೆ ಹೊಸ ಕಾಯಕಲ್ಪದೊಂದಿಗೆ ಕೆಲಸ ಮಾಡಬೇಕಿದೆ ಎಂದಿದ್ದಾರೆ. ಈ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಪತ್ರ ಬರೆದಿರುವ ಸುರೇಶ್ ಕುಮಾರ್, ಪ್ರತಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ನಡುವೆ ಸೋದರತ್ವ, ಸೌಹಾರ್ದತೆಯನ್ನು ಕಾಪಾಡುವ, ಶೈಕ್ಷಣಿಕ ವಾತಾವರಣ ಸಂರಕ್ಷಿಸುವ ನಿಟ್ಟಿನಲ್ಲಿ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಗಳು, ಶಾಲೆ-ಕಾಲೇಜು ಸಲಹಾ ಸಮಿತಿಗಳಿಗೆ ಹಿಂದೆಂದಿಗಿಂತಲೂ ಹೆಚ್ಚಿನ ಜವಾಬ್ದಾರಿ ನಿಗದಿಪಡಿಸಬೇಕಿದೆ ಎಂಬುದೂ ಸೇರಿದಂತೆ ಹಲವು ಸಲಹೆ ನೀಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button