
ಬೆಂಗಳೂರು: ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಿಂದ ವಂಚಿಸಿ ಆತ್ಮಹತ್ಯೆಗೆ ದೂಡುತ್ತಿರುವ ನೀಟ್ ಪರೀಕ್ಷೆ ವಿರುದ್ಧ ತಮಿಳುನಾಡಿನಂತೆ ರಾಜ್ಯ ಸರ್ಕಾರವೂ ನಿರ್ಣಯ ಕೈಗೊಳ್ಳುವಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಈ ಸಂಬಂಧ ಸೊರಬ ತಾಲೂಕಿನ ಸಂಕಲ್ಪ ಹೆಸರಿನ ವಿದ್ಯಾರ್ಥಿನಿಯ ಆತ್ಮಹತ್ಯೆ ಪ್ರಕರಣವನ್ನು ಉದಾಹರಿಸಿ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ನಮ್ಮ ಮಕ್ಕಳ ಜೀವದ ಜತೆ ಚೆಲ್ಲಾಟ ಆಡುತ್ತಿರುವ ನೀಟ್ ಪರೀಕ್ಷೆ ಬಗ್ಗೆ ನಾವು ಮರು ಆಲೋಚನೆ ಮಾಡಬೇಕಿದೆ ಎಂದು ಹೇಳಿದ್ದಾರೆ.
ಈಗಾಗಲೇ ತಮಿಳುನಾಡು ಸರಕಾರ ನೀಟ್ ವಿರುದ್ಧ ನಿರ್ಣಯ ಕೈಗೊಂಡಿದೆ. ನಮ್ಮ ಸರಕಾರವೂ ಇಂತಹ ನಿಲುವಿಗೆ ಬರಲಿ. ರಾಜ್ಯದಲ್ಲಿ ಇನ್ನಷ್ಟು ವಿದ್ಯಾರ್ಥಿಗಳು ಸಂಕಲ್ಪ ಅವರ ಹಾದಿ ಹಿಡಿಯುವುದನ್ನು ತಪ್ಪಿಸಬೇಕು ಎಂದು ಸಲಹೆ ನೀಡಿದ್ದಾರೆ.
ನಮ್ಮ ಶಿಕ್ಷಣ ವ್ಯವಸ್ಥೆ ಬದಲಾಗಬೇಕು ಹಾಗೂ ಉನ್ನತ ಶಿಕ್ಷಣ ಬಡ, ಸಾಮಾನ್ಯ ಮಕ್ಕಳಿಗೂ ಸಿಗಬೇಕು ಎನ್ನುವ ಕಾಳಜಿಯ ಜತೆಗೆ, ಯಾರೇ ವಿದ್ಯಾರ್ಥಿಗಳು ಸೀಟು ಸಿಗಲಿಲ್ಲ ಎನ್ನುವ ಕಾರಣಕ್ಕೆ ಬದುಕನ್ನು ಕೊನೆ ಮಾಡಿಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.
ಸೊರಬ ತಾಲೂಕಿನ ಚನ್ನಪಟ್ಟಣ ಗ್ರಾಮದ ಸಂಕಲ್ಪ ಎಂಬ ವಿದ್ಯಾರ್ಥಿನಿ ಸಾವಿಗೆ ಶರಣಾಗಿರುವುದು ನನಗೆ ತೀವ್ರ ಆಘಾತ ಉಂಟು ಮಾಡಿದೆ. ಹೀಗೆ ಜೀವವನ್ನು ಕೊನೆ ಮಾಡಿಕೊಂಡ ಆ ಯುವತಿಯ ದುರ್ಮರಣ ಎಲ್ಲರಿಗೂ ಪಾಠ ಆಗಬೇಕಿದೆ ಎಂದಿದ್ದಾರೆ.
ಸಂಕಲ್ಪ ವೈದ್ಯೆ ಆಗಬೇಕು ಎಂದು ಕನಸು ಕಂಡಿದ್ದರು. ದ್ವಿತೀಯ ಪಿಯುಸಿಯಲ್ಲಿ ಶೇ.96ರಷ್ಟು ಅಂಕ ಗಳಿಸಿದ್ದರೂ ಅವರಿಗೆ ನೀಟ್ ಪರೀಕ್ಷೆಯಲ್ಲಿ ನಿರೀಕ್ಷಿತ ಅಂಕ ಬಾರದೇ ಸರಕಾರಿ ಸೀಟು ಸಿಗಲಿಲ್ಲ. ಈ ಕಾರಣಕ್ಕೆ ಆ ಹೆಣ್ಣುಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತ್ರಿಕೆಯೊಂದರ ವರದಿಯನ್ನು ಟ್ಯಾಗ್ ಮಾಡಿದ್ದಾರೆ.
ಅವಕಾಶಗಳು ಆಕಾಶದಷ್ಟು ಇವೆ. ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಮಾರ್ಗಗಳು ಕೂಡ ಇವೆ. ದೃಢ ಸಂಕಲ್ಪದೊಂದಿಗೆ ಭವಿಷ್ಯ ಕಂಡುಕೊಳ್ಳಬೇಕು. ಯಾವುದೇ ಕಾರಣಕ್ಕೂ ಸಂಕಲ್ಪ ಅವರಂತೆ ಜೀವ ತೆಗೆದುಕೊಳ್ಳಬಾರದು. ಇದು ನನ್ನ ಕಳಕಳಿಯ ಮನವಿ ಎಂದೂ ಕುಮಾರಸ್ವಾಮಿ ಹೇಳಿದ್ದಾರೆ.
