ನೆಹರೂ ಬಗ್ಗೆ ವಾಜಪೇಯಿ ಚಾರಿತ್ರಿಕ ಭಾಷಣವನ್ನು ಸಿ.ಟಿ ರವಿ ಓದಲಿ: ಎಚ್ ವಿಶ್ವನಾಥ್

ಮೈಸೂರು: ತಮ್ಮ ಪಕ್ಷಗಳ ಮುಖಂಡರನ್ನು ಮೆಚ್ಚಿಸಲು, ರಮಿಸಲು ಮತ್ತು ಪ್ರಚಾರಕ್ಕೆ ನೆಹರು, ವಾಜಪೇಯಿ ಬಗ್ಗೆ ಬಿಜೆಪಿಯ ಸಿ.ಟಿ. ರವಿ ಮತ್ತು ಕಾಂಗ್ರೆಸ್ ಮುಖಂಡ ಪ್ರಿಯಾಂಕ ಖರ್ಗೆ ಲಘುವಾಗಿ ಹೇಳಿಕೆ ನೀಡಿರುವುದು ಅನೈತಿಕ ರಾಜಕಾರಣ ಎಂದು ಹಿರಿಯ ಮುಖಂಡ, ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಕಿಡಿಕಾರಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆಹರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹೋರಾಟ ನಡೆಸಿ, ಜೈಲು ಸೇರಿದವರು. ಹಾಗೆಯೇ ವಾಜಪೇಯಿ ಕವಿ ಹೃದಯವುಳ್ಳ ಭಾರತ ಕಂಡ ಅಪ್ರತಿಮ ರಾಜಕಾರಣಿ. ಇಂತಹ ಮಹನೀಯರ ಬಗ್ಗೆ ಅವಿವೇಕತನದಿಂದ ಮಾತನಾಡಿರುವುದು ಹೇಸಿಗೆ ತರುವಂಥದ್ದು ಎಂದು ಖಂಡಿಸಿದರು.
ನೆಹರೂ ಅವರು ಅಸ್ತಂಗತರಾದಾಗ ಯುವ ನಾಯಕರಾಗಿದ್ದ ವಾಜಪೇಯಿ ಅವರು ನೆಹರೂ ಅವರನ್ನು ಹೇಗೆ ಬಣ್ಣಿಸಿದ್ದಾರೆಂದು ತಿಳಿದುಕೊಳ್ಳಬೇಕು. ಆಗ ನೆಹರೂ ಕುರಿತು ವಾಜಪೇಯಿ ಅವರು ಮಾಡಿದ ಭಾಷಣ ಚಾರಿತ್ರಿಕವಾದುದು. ಅದನ್ನು ಸಿ ಟಿ ರವಿ ಓದಬೇಕು. ಜಾತ್ಯತೀತ ರಾಷ್ಟ್ರಕಟ್ಟಿದ ನೆಹರೂ ಅವರ ಬಗ್ಗೆ ಸಿ.ಟಿ ರವಿ ಹಗುರವಾಗಿ, ಬಾಲಿಶವಾಗಿ ಮಾತನಾಡಿರುವುದು ಸರಿಯಲ್ಲ. ಕೇವಲ ಪ್ರಚಾರಕ್ಕೋಸ್ಕರ ಸಿ ಟಿ ರವಿ ಈ ರೀತಿ ಮಾತನಾಡಿರುವುದು ಖಂಡನೀಯ. ಸಿ.ಟಿ ರವಿ ತಮ್ಮ ಹೇಳಿಕೆಯನ್ನು ವಾಪಸ್ ಪಡೆದರೆ ಸಂತೋಷವಾಗಲಿದೆ ಎಂದರು.
ಮಾಜಿ ಪ್ರಧಾನಿ ಅಟಲ್ ವಾಜಪೇಯಿ ಅವರನ್ನು ಕುಡುಕನಾಗಿದ್ದ ಎಂದು ಟೀಕಿಸಿರುವ ಮಾಜಿ ಸಚಿವ ಪ್ರಿಯಾಂಕ ಖರ್ಗೆಯನ್ನು ತರಾಟೆಗೆ ತೆಗೆದುಕೊಂಡರು. ಪ್ರಿಯಾಂಕ ಖರ್ಗೆ ಸಹ ಸಚಿವರಾಗಿದ್ದಂಥವರು. ವಾಜಪೇಯಿಯವರ ಬಗ್ಗೆ ಮಾತಾಡಲು ಇವರಿಗೆ ನೈತಿಕತೆ ಇಲ್ಲ. ಈ ರೀತಿಯ ಹೇಳಿಕೆಗಳು ಹೊರ ಬೀಳುತ್ತಿದ್ದರೂ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ, ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಮೊದಲಾದವರು ಸುಮ್ಮನಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ತಮ್ಮ ತಂದೆಯನ್ನು ನೋಡಿಯಾದರೂ ಪ್ರಿಯಾಂಕ್ ಖರ್ಗೆ ಕಲಿಯಬೇಕು ಎಂದರು.
ಇಂದಿರಾ ಕ್ಯಾಂಟೀನ್ ಹೆಸರು ಬದಲಿಸುವುದು ಸಣ್ಣತನ
ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಬೇಕೆಂಬ ಬಿಜೆಪಿ ನಾಯಕರ ಹೇಳಿಕೆಗೆ ಟಾಂಗ್ ನೀಡಿದ ಅವರು, ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಬೇಕೆಂಬುದು ಸಣ್ಣತನವಾಗಿದೆ. ವಾಜಪೇಯಿ ಹೆಸರಿನಲ್ಲೂ ಕೆಲವು ಯೋಜನೆಗಳು ಇಲ್ಲವೆ? ಅದೇ ರೀತಿ ಬೇರೆ ಬೇರೆ ನಾಯಕರ ಹೆಸರಿನಲ್ಲೂ ಯೋಜನೆಗಳನ್ನು ತರಲಾಗಿದೆ ಎಂದು ಹೇಳಿದರು.
